ಸರ್ವಪಕ್ಷಗಳ ಸಭೆ: ಸಿಕ್ಕಿಂ ಬಿಕ್ಕಟ್ಟಿನ ಕುರಿತು ವಿಪಕ್ಷಗಳಿಗೆ ವಿವರ ನೀಡಿದ ಸರಕಾರ

Update: 2017-07-14 15:51 GMT

ಹೊಸದಿಲ್ಲಿ, ಜು.14: ಸಿಕ್ಕಿಂ ಗಡಿಭಾಗದಲ್ಲಿ ಚೀನಾದೊಂದಿಗೆ ಕಳೆದ ಒಂದು ತಿಂಗಳಿಂದ ತಲೆದೋರಿರುವ ಬಿಕ್ಕಟ್ಟಿನ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಇಂದಿಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷದ ಮುಖಂಡರಿಗೆ ವಿವರ ನೀಡಿದರು.

   ತ್ರಿರಾಷ್ಟ್ರ ಸಂಧಿ ಸ್ಥಳ(ಚೀನಾ-ಭೂತಾನ್- ಭಾರತ)ದಲ್ಲಿ ಈ ತಿಂಗಳ ಆರಂಭದಲ್ಲಿ ವಿವಾದ ಆರಂಭವಾಗಿತ್ತು. ದೋಂಗ್ಲಂಗ್ ಎಂದು ಚೀನಾ ಕರೆಯುವ ಈ ಪ್ರದೇಶದಲ್ಲಿ ತಾನು ರಸ್ತೆ ನಿರ್ಮಿಸುತ್ತಿದ್ದಾಗ ಭಾರತದ ಪಡೆ ಗಡಿ ದಾಟಿ ಬಂದು ತಡೆದಿದೆ ಎಂದು ಚೀನಾ ಹೇಳುತ್ತಿದೆ. ಆದರೆ ಚೀನಾ ರಸ್ತೆ ನಿರ್ಮಿಸುತ್ತಿರುವ ಸ್ಥಳವನ್ನು ದೋಕ್ಲಮ್ ಎಂದು ಕರೆಯಲಾಗುತ್ತಿದೆ ಮತ್ತು ಇದು ಭೂತಾನ್‌ಗೆ ಸೇರಿದ ಭೂಪ್ರದೇಶವಾಗಿದೆ ಎಂಬುದು ಭಾರತ ಮತ್ತು ಭೂತಾನ್‌ಗಳ ನಿಲುವಾಗಿದೆ. ಇಲ್ಲಿ ಚೀನಾ ರಸ್ತೆ ನಿರ್ಮಿಸಿದರೆ ತನಗೆ ಗಂಭೀರ ಭದ್ರತಾ ಸಮಸ್ಯೆ ಎದುರಾಗುತ್ತಿದೆ ಎಂದಿರುವ ಭಾರತ, ಈ ರಸ್ತೆಯ ಮೂಲಕ ಚೀನಾವು ‘ಚಿಕನ್ಸ್ ನೆಕ್’ ಎಂದು ಕರೆಯಲಾಗುವ ಕಿರಿದಾದ, ಆದರೆ ಮಹತ್ವಪೂರ್ಣ ಭೂಪ್ರದೇಶಕ್ಕೆ ಸುಲಭದಲ್ಲಿ ಪ್ರವೇಶಿಸಬಹುದು ಎಂದು ಕಳವಳ ಸೂಚಿಸಿದೆ. ‘ಚಿಕನ್ಸ್ ನೆಕ್’ ಭೂಭಾಗವು ಭಾರತದ ಏಳು ಈಶಾನ್ಯ ರಾಜ್ಯಗಳನ್ನು ದೇಶದ ಪ್ರಮುಖ ಭೂಭಾಗದೊಂದಿಗೆ ಜೋಡಿಸುವ ಕೊಂಡಿಯಾಗಿದೆ.

 ಭಾರತವು ಗಡಿ ದಾಟಿದ ತನ್ನ ತಪ್ಪನ್ನು ಮರೆಮಾಚಲು ರಸ್ತೆ ನಿರ್ಮಾಣ ಕಾರ್ಯದ ನೆಪ ಹೇಳುತ್ತಿದೆ . ಚೀನಾದ ಭೂಭಾಗದಿಂದಭಾರತದ ಸೇನೆ ಹಿಂದೆ ಸರಿಯುವ ವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗದು ಎಂದು ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ.
 ಜರ್ಮನಿಯಲ್ಲಿ ಕಳೆದ ವಾರ ನಡೆದ ಜಿ-20 ಶೃಂಗಸಭೆಯ ಸಂದರ್ಭ ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗಿದ್ದರು ಮತ್ತು ಹಲವಾರು ಪ್ರಮುಖ ವಿಷಯಗಳ ಬಗ್ಗೆ ಅನೌಪಚಾರಿಕ ಮಾತುಕತೆ ನಡೆಸಿದ್ದರು.

  ಬಳಿಕ ಮತ್ತೊಮ್ಮೆ ಭಾರತಕ್ಕೆ ಎಚ್ಚರಿಕೆ ನೀಡಿದ್ದ ಚೀನಾ- ಭಾರತ ತನ್ನ ಸೇನೆಯನ್ನು ವಾಪಾಸು ಕರೆಸಿಕೊಳ್ಳದಿದ್ದರೆ ಇನ್ನಷ್ಟು ತೀವ್ರ ಪರಿಸ್ಥಿತಿ ಉದ್ಭವಿಸಬಹುದು ಮತ್ತು ಇದರ ಪರಿಣಾಮ ಇನ್ನಷ್ಟು ತೀವ್ರವಾಗಿರಬಹುದು ಎಂದು ಹೇಳಿಕೆ ನೀಡಿತ್ತು. ಈ ಮಧ್ಯೆ , ಭಾರತಕ್ಕೆ ಕಠಿಣವಾದ ಪಾಠ ಕಲಿಸಬೇಕಾದ ಅಗತ್ಯವಿದೆ ಎಂದು ಚೀನಾದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ 1962ರ ಯುದ್ದಕ್ಕಿಂತಲೂ ಘನಘೋರವಾದ ಸೋಲು ಭಾರತಕ್ಕೆ ಎದುರಾಗಲಿದೆ ಎಂದು ಎಚ್ಚರಿಸಲಾಗಿತ್ತು.
3,500 ಕಿ.ಮೀ. ಉದ್ದದ ಗಡಿಯಲ್ಲಿ ತಕರಾರು ಇರುವುದು ಸಹಜ. ಆದರೆ ಎರಡೂ ದೇಶಗಳು ಈ ವಿವಾದವನ್ನು ಸೂಕ್ತವಾಗಿ ನಿರ್ವಹಿಸಲು ಸಮರ್ಥವಾಗಿವೆ ಎಂದು ವಿದೇಶ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಎಸ್.ಜೈಶಂಕರ್ ಈ ವಾರದ ಆರಂಭದಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಚೀನಾ, ಈಗ ಉದ್ಭವಿಸಿರುವ ವಿವಾದ ವಿಭಿನ್ನವಾಗಿದೆ ಎಂದು ಹೇಳಿತ್ತು.

 ಈ ಎಲ್ಲಾ ಆತಂಕ, ಉದ್ವೇಗದ ಪರಿಸ್ಥಿತಿಯ ನಡುವೆಯೇ ಮೂವರು ಕೇಂದ್ರ ಸಚಿವರು ಚೀನಾದಲ್ಲಿ ನಡೆದ ‘ಬ್ರಿಕ್ಸ್’ ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಜುಲೈ 27ರಂದು ಚೀನಾದ ರಾಷ್ಟ್ರೀಯ ಭದ್ರತಾ ಸಲೆಹೆಗಾರರು ಕರೆದಿರುವ ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಪಾಲ್ಗೊಳ್ಳಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News