ಮುಖ್ಯ ಕೋಚ್ ಆಗಿ ಶಾಸ್ತ್ರಿನೇಮಕಕ್ಕೆ ಸಿಒಎ ಅಸ್ತು

Update: 2017-07-15 18:46 GMT

ಹೊಸದಿಲ್ಲಿ, ಜು.15: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಅವರನ್ನು ನೇಮಕ ಮಾಡಿರುವುದನ್ನು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಅಂಗೀಕರಿಸಿದ್ದು, ಆದರೆ ಝಹೀರ್ ಖಾನ್ ಮತ್ತು ರಾಹುಲ್ ದ್ರಾವಿಡ್ ನೇಮಕಾತಿಯ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.

  ಝಹೀರ್ ಖಾನ್ ಮತ್ತು ರಾಹುಲ್ ದ್ರಾವಿಡ್ ನೇಮಕವನ್ನು ತಡೆ ಹಿಡಿದಿರುವ ಆಡಳಿತಗಾರರ ಸಮಿತಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರಲ್ಲಿ ಜುಲೈ 22ರಂದು ಚರ್ಚಿಸಿದ ಬಳಿಕ ಬ್ಯಾಟಿಂಗ್ ,ಬೌಲಿಂಗ್ ಕೋಚ್ ಮತ್ತು ಸಹಾಯಕ ಸಿಬ್ಬಂದಿಯ ನೇಮಕದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಒಎ ಸ್ಪಷ್ಟಪಡಿಸಿದೆ.

  ಸಿಒಎ ಮುಖ್ಯಸ್ಥ ವಿನೋದ್ ರಾಯ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋಚಿಂಗ್ ತಂಡಕ್ಕೆ ಸಲಹೆಗಾರರನ್ನು ನೇಮಿಸುವ ವಿಚಾರವನ್ನು ಮುಖ್ಯ ಕೋಚ್ ಅವರಲ್ಲಿ ಚರ್ಚಿಸಿದ ಬಳಿಕ ನಿಧರ್ರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಸಿಒಎ ಸದಸ್ಯರಾದ ಡಯಾನಾ ಎಡುಲ್ಜಿ ಮತ್ತು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಸಭೆಯಲ್ಲಿ ಉಪಸ್ಥಿತರಿದ್ದರು. ವಿದೇಶಿ ಪ್ರವಾಸ ಸರಣಿಗಳಿಗೆ ಬ್ಯಾಟಿಂಗ್ ಕೋಚ್ ಆಗಿ ರಾಹುಲ್ ದ್ರಾವಿಡ್ ಮತ್ತು ಬೌಲಿಂಗ್ ಕೋಚ್ ಆಗಿ ಝಹೀರ್ ಖಾನ್ ನೇಮಿಸುವ ಬಿಸಿಸಿಐ ನಿರ್ಧಾರಕ್ಕೆ ಸಿಒಎ ತಾತ್ಕಾಲಿಕ ತಡೆ ವಿಧಿಸಿದೆ.

ಶಾಸ್ತ್ರಿ ವೇತನ ನಿರ್ಧರಿಸಲು ನಾಲ್ವರು ಸದಸ್ಯರ ಸಮಿತಿ ರಚನೆ

ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ ರವಿ ಶಾಸ್ತ್ರಿ ಹಾಗೂ ಇತರ ಸಹಾಯಕ ಸಿಬ್ಬಂದಿಯ ವೇತನವನ್ನು ನಿರ್ಧರಿಸಲು ಆಡಳಿತಾಧಿಕಾರಿಗಳ ಸಮಿತಿ(ಸಿಎಒ) ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ. ಸಮಿತಿಯಲ್ಲಿ ಬಿಸಿಸಿಐನ ಪ್ರಭಾರ ಅಧ್ಯಕ್ಷ ಸಿ.ಕೆ.ಖನ್ನಾ, ಸಿಇಒ ರಾಹುಲ್ ಜೊಹ್ರಿ ಅವರಲ್ಲದೆ, ಸಿಒಎ ಸದಸ್ಯರುಗಳಾದ ಡಿಯಾನಾ ಎಡುಲ್ಜಿ ಹಾಗೂ ಬಿಸಿಸಿಐನ ಹಂಗಾಮಿ ಪ್ರಭಾರ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರಿದ್ದಾರೆ. ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿಯು ಜುಲೈ 19 ರಂದು ಸಭೆ ಸೇರಿ ವೇತನ ನಿಗದಿಪಡಿಸಲಿದೆ. ಮೂವರು ಸದಸ್ಯರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಶಾಸ್ತ್ರಿ ಅವರನ್ನು ಮುಖ್ಯ ಕೋಚ್‌ರನ್ನಾಗಿ, ರಾಹುಲ್ ದ್ರಾವಿಡ್ ಹಾಗೂ ಝಹೀರ್ ಖಾನ್ ಅವರನ್ನು ವಿದೇಶಿ ಪ್ರವಾಸಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಲಹೆಗಾರರನ್ನಾಗಿ ನೇಮಕ ಮಾಡಿತ್ತು. ಭಾರತದ ಕ್ರಿಕೆಟ್ ತಂಡ ಜು.19 ರಂದು ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಭಾರತ ಜು.26 ರಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News