‘ಕಾನೂನನ್ನು ಪಾಲಿಸುವ ಸಂಸ್ಕೃತಿಯನ್ನು ಸೃಷ್ಟಿಸಿ’
ಹೊಸದಿಲ್ಲಿ,ಜು.16: ನಗರದಲ್ಲಿ ಮಾಲಿನ್ಯವುಂಟು ಮಾಡುತ್ತಿರುವ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳನ್ನು ವಿತರಿಸುವುದರ ವಿರುದ್ಧ ಕೇಂದ್ರ ಮತ್ತು ದಿಲ್ಲಿಯ ಆಪ್ ಸರಕಾರಗಳಿಗೆ ಎಚ್ಚರಿಕೆಯನ್ನು ನೀಡಿರುವ ದಿಲ್ಲಿ ಉಚ್ಚ ನ್ಯಾಯಾಲಯವು, ಕಾನೂನನ್ನು ಪಾಲಿಸುವ ಸಂಸ್ಕೃತಿಯನ್ನು ಸೃಷ್ಟಿಸುವಂತೆ ಅವುಗಳಿಗೆ ಕಿವಿಮಾತು ಹೇಳಿದೆ.
ರಾಜಧಾನಿಯಲ್ಲಿ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯ ಕುರಿತು ಆಗಾಗ್ಗೆ ದಿಢೀರ್ ತಪಾಸಣೆಯನ್ನು ನಡೆಸುವಲ್ಲಿ ಸಂಬಂಧಿಸಿದ ಇಲಾಖೆಗಳ ವೈಫಲ್ಯದ ಬಗ್ಗೆಯೂ ಪ್ರಭಾರ ಮುಖ್ಯ ನ್ಯಾಯಾಧೀಶರಾದ ಗೀತಾ ಮಿತ್ತಲ್ ಮತ್ತು ನ್ಯಾ.ಸಿ.ಹರಿಶಂಕರ್ ಅವರ ಪೀಠವು ಕಳವಳ ವ್ಯಕ್ತಪಡಿಸಿತು.
ವಾಹನಗಳಿಗೆ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಜಾರಿಗೊಳಿಸಲು ವಿಶೇಷ ಅಭಿಯಾನದ ಅಗತ್ಯವಿಲ್ಲ. ನಾವು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,ಅಷ್ಟೇ. ಅಂತಹ ಸಂಸ್ಕೃತಿಯನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಎನ್‌ಜಿಒ ಸಿಪಿಪಿಡಿಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಪೀಠವು ಹೇಳಿತು.
ಮಾಲಿನ್ಯವನ್ನುಂಟು ಮಾಡುವ ವಾಹನಗಳ ಚಾಲನೆಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿರುವ 1988ರ ಮೋಟಾರು ವಾಹನ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ವೈಫಲ್ಯವು ದಿಲ್ಲಿಯಲ್ಲಿ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚುವುದಕ್ಕೆ ಕಾರಣವಾಗಿದೆ ಎಂದು ಎನ್‌ಜಿಒ ತನ್ನ ಅರ್ಜಿಯಲ್ಲಿ ಆಪಾದಿಸಿದೆ.
ತಪಾಸಣಾ ಕೇಂದ್ರಗಳಲ್ಲಿ ನಡೆಸಲಾಗುವ ಮಾಲಿನ್ಯ ಪರೀಕ್ಷೆ ಸೋಗಿನದಾಗಿದ್ದು, ಸರಕಾರ ಮತ್ತು ಅದರ ಸಂಸ್ಥೆಗಳಿಗೆ ಗೊತ್ತಿದ್ದೇ ಬೇಕಾಬಿಟ್ಟಿಯಾಗಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಎನ್‌ಜಿಒ ಪರ ವಕೀಲ ಅನಿಲ ಅಗರವಾಲ್ ಅವರು ವಾದಿಸಿದರು.
ಎನ್‌ಜಿಒ ತನ್ನ ದೂರಿನಲ್ಲಿ ಪ್ರಸ್ತಾಪಿಸಿರುವ ಅಂಶಗಳ ಕುರಿತು ನಾಲ್ಕು ವಾರಗಳಲ್ಲಿ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಆಪ್ ಸರಕಾರಕ್ಕೆ ನಿರ್ದೇಶ ನೀಡಿದ ನ್ಯಾಯಾಲ ಯವು ಮುಂದಿನ ವಿಚಾರಣೆಯನ್ನು ಅ.31ಕ್ಕೆ ನಿಗದಿಗೊಳಿಸಿತು.