ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನವಿರಲಿ
ಮಾನ್ಯರೆ,
ನಾವು ನಮ್ಮ ಆರೋಗ್ಯವನ್ನು ಕಾಪಾಡುವ ದಾರಿ ಹುಡುಕುತ್ತೇವೆಯೇ ವಿನಃ ಸುತ್ತಮುತ್ತಲಿನ ಪರಿಸರದ ಆರೋಗ್ಯವನ್ನು ಕಾಪಾಡುವಲ್ಲಿ ಹಿಂದೆ ಉಳಿದಿದ್ದೇವೆ. ಪರಿಸರದ ದಿನ ಮಾತ್ರವೇ ‘ನಮ್ಮ ಪರಿಸರ’ ಎಂಬ ಭಾವನೆ ಬರುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ಸಾರುವ ನಾವು ಸುತ್ತಮುತ್ತಲಿನ ವಾತಾವರಣವನ್ನು ಸ್ವತಃ ಹಾಳುಮಾಡುತ್ತಿದ್ದೇವೆ.
ಕಸವನ್ನು ಎಲ್ಲೆಂದರಲ್ಲಿ ಹಾಕುವ ಮೂಲಕ ಸುತ್ತಮುತ್ತಲಿನ ಪರಿಸರವನ್ನು ಕಲುಷಿತಗೊಳಿಸುತ್ತಿದ್ದೇವೆ. ದಾವಣಗೆರೆಯ ಆಸುಪಾಸಿನಲ್ಲಿ ಕಸದ ತೊಟ್ಟಿಗಳು ಸಹ ಕಾಣೆಯಾಗಿದ್ದು, ಜೊತೆಗೆ ಹಂದಿಗಳ ಕಾಟವೂ ಹೆಚ್ಚಾಗಿದೆ. ದಾವಣಗೆರೆಯ ನಿಟ್ಟುವಳ್ಳಿ, ಹೊಂಡದ ಸರ್ಕಲ್, ಭರತ್ ಕಾಲನಿ, ಮಂಡಿ ಪೇಟೆ, ಅವರಗೆರೆ, ತೊಳಹುಣಸೆ ಮುಂತಾದ ಬಹುತೇಕ ಭಾಗದಲ್ಲಿ ಇಂತಹ ಪರಿಸ್ಥಿತಿಯನ್ನು ಕಾಣಬಹುದು.
ಜೊತೆಗೆ ವಿವಿಧೆಡೆ ರಸ್ತೆ ಕಾಮಗಾರಿಯು ನಡೆಯುತ್ತಿದ್ದು, ಅವುಗಳಿಂದಲೂ ಸ್ವಚ್ಛತಾ ವಿಚಾರದಲ್ಲಿ ಹೆಚ್ಚು ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಿದರೆ ಒಳಿತು.