ರಾಜ್ಯದವರಿಗೆ ಮಾತ್ರ ಅವಕಾಶವಿರಲಿ
Update: 2017-07-16 23:57 IST
ಮಾನ್ಯರೆ,
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿರುವ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ಹೊರ ರಾಜ್ಯದ ವಿದ್ಯಾರ್ಥಿಗಳಿಗೂ ಆದ್ಯತೆ ನೀಡಿರುವುದರಿಂದ ನಮ್ಮ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳಿಂದ ವಂಚಿತರಾಗುತ್ತಿದ್ದಾರೆ. ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಆಯಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಈ ಮೇಲಿನ ಕೋರ್ಸ್‌ಗಳಿಗೆ ಮಾತ್ರ ಅವಕಾಶ ನೀಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಇತರರಿಗೆ ಅವಕಾಶ ನೀಡಿರುವುದು ಸರಿಯಲ್ಲ.
ಆದ್ದರಿಂದ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಈ ಕುರಿತು ಗಂಭೀರವಾಗಿ ಗಮನಹರಿಸಿ ರಾಜ್ಯದ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನೀಗಿಸಲು ನಮ್ಮ ರಾಜ್ಯದವರಿಗೆ ಅವಕಾಶ ನೀಡುವ ಮೂಲಕ ರೋಗಿಗಳ ಸೇವೆ ಮಾಡಲು ಆದ್ಯತೆ ಮಾಡಿಕೊಡಲಿ.