ಅಂದುಕೊಂಡಿದ್ದನ್ನು ಸಾಧಿಸಿದ ರವಿ ಶಾಸ್ತ್ರಿ

Update: 2017-07-18 18:26 GMT

ಹೊಸದಿಲ್ಲಿ, ಜು.18: ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಹಾಗೂ ಬೌಲಿಂಗ್ ಕೋಚ್ ಹುದ್ದೆಗೆ ಭರತ್ ಅರುಣ್‌ರನ್ನು ಬಿಸಿಸಿಐ ಮಂಗಳವಾರ ನೇಮಕ ಮಾಡಿದೆ. ಆರ್. ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ. ಈ ಮೂಲಕ ಮುಖ್ಯ ಕೋಚ್ ರವಿ ಶಾಸ್ತ್ರಿ ತಾನು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.

ರವಿ ಶಾಸ್ತ್ರಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ ಮುಂಬೈನಲ್ಲಿ ಕರೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಕೋಚ್ ಹೆಸರುಗಳನ್ನು ಘೋಷಿಸಲಾಗಿದೆ. ಭಾರತದ ಮಾಜಿ ವೇಗದ ಬೌಲರ್ ಭರತ್ ಅರುಣ್ ಅವರು ಶಾಸ್ತ್ರಿಯವರ ಬೆಂಬಲದಿಂದಾಗಿ ಕೋಚಿಂಗ್ ವಿಭಾಗಕ್ಕೆ ವಾಪಸಾಗಿದ್ದಾರೆ. ಆಡಳಿತಾಧಿಕಾರಿಗಳ ಸಮಿತಿ(ಸಿಎಒ) ಹಾಗೂ ಬಿಸಿಸಿಐ ಅಧಿಕಾರಿಗಳು, ಪ್ರಭಾರ ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ ಹಾಗೂ ಕಾರ್ಯದರ್ಶಿ ಅಮಿತಾಭ್ ಚೌಧರಿಯವರನ್ನು ರವಿ ಶಾಸ್ತ್ರಿ ಭೇಟಿಯಾದ ಬಳಿಕ ಅರುಣ್‌ರನ್ನು ಎರಡು ವರ್ಷಗಳ ಅವಧಿಗೆ ಬೌಲಿಂಗ್ ಕೋಚ್‌ರನ್ನಾಗಿ ನೇಮಿಸಲಾಗಿದೆ.

ರಾಹುಲ್ ದ್ರಾವಿಡ್ ಹಾಗೂ ಝಹೀರ್ ಖಾನ್ ಸ್ಥಾನಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಕ್ರಿಕೆಟ್ ಸಲಹಾ ಸಮಿತಿಯು ಜು.10 ರಂದು ಶಾಸ್ತ್ರಿ ಅವರನ್ನು ಮುಖ್ಯ ಕೋಚ್‌ರನ್ನಾಗಿ ಘೋಷಿಸಿದ ಸಂದರ್ಭದಲ್ಲಿ ದ್ರಾವಿಡ್‌ರನ್ನು ವಿದೇಶಿ ಸರಣಿಯಲ್ಲಿ ಬ್ಯಾಟಿಂಗ್ ಕೋಚ್‌ರನ್ನಾಗಿ ಹಾಗೂ ಝಹೀರ್‌ರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿತ್ತು.

‘‘ಕೋಚಿಂಗ್ ತಂಡಕ್ಕೆ ದ್ರಾವಿಡ್ ಹಾಗೂ ಝಹೀರ್‌ಗೆ ಸ್ವಾಗತವಿದೆ. ಇಬ್ಬರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಅವರಿಬ್ಬರ ಸಲಹೆ-ಸೂಚನೆ ಅತ್ಯಂತ ಮುಖ್ಯವಾಗುತ್ತದೆ. ತಂಡದೊಂದಿಗೆ ಈ ಇಬ್ಬರು ಎಷ್ಟು ದಿನ ಲಭ್ಯವಿರುತ್ತಾರೆ ಎನ್ನುವುದರ ಮೇಲೆ ಎಲ್ಲವೂ ಅವಲಂಭಿಸಿರುತ್ತದೆ. ಅವರ ಸೇವೆಯನ್ನು ನಾನು ಸ್ವಾಗತಿಸುತ್ತೇನೆ’’ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಸ್ತ್ರಿ ತಿಳಿಸಿದ್ದಾರೆ.

ತಮಿಳುನಾಡಿನ ಮಾಜಿ ಮಧ್ಯಮ ವೇಗದ ಬೌಲರ್ ಭರತ್ ಈ ಹಿಂದೆ 2014 ಆಗಸ್ಟ್‌ನಿಂದ 2016ರ ಎಪ್ರಿಲ್ ತನಕ ರವಿ ಶಾಸ್ತ್ರಿ ತಂಡದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಬೌಲಿಂಗ್ ಕೋಚ್ ಆಗಿದ್ದರು. ಇದೀಗ 2 ವರ್ಷಗಳ ಅವಧಿಗೆ ಬೌಲಿಂಗ್ ಕೋಚ್ ಆಯ್ಕೆಯಾಗಿರುವ ಅರುಣ್ 2019ರ ವಿಶ್ವಕಪ್ ತನಕ ತಂಡದಲ್ಲಿರುತ್ತಾರೆ. ಸಂಜಯ್ ಬಂಗಾರ್‌ರನ್ನು 2 ವರ್ಷಗಳ ಕಾಲ ಸಹಾಯಕ ಕೋಚ್‌ರನ್ನಾಗಿ ನೇಮಿಸಲಾಗಿದೆ.

ಭಾರತ ತಂಡ ಜು.19 ರಂದು ಕೊಲಂಬೊಕ್ಕೆ ಪ್ರಯಾಣಿಸಲಿದೆ. ಜು.26 ರಿಂದ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದ್ದು, ಶ್ರೀಲಂಕಾ ಪ್ರವಾಸದ ವೇಳೆ 3 ಟೆಸ್ಟ್, ಐದು ಏಕದಿನ ಹಾಗೂ 1 ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ.

ನೂತನ ಬೌಲಿಂಗ್ ಕೋಚ್ ಭರತ್ ಅರುಣ್ ಪರಿಚಯ

ತಮಿಳುನಾಡಿನ ಅರುಣ್ ಭರತ್ ಮಧ್ಯಮ ವೇಗದ ಬೌಲಿಂಗ್‌ನ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದರು. 1980ರ ದಶಕದಲ್ಲಿ ಕಪಿಲ್‌ದೇವ್‌ರೊಂದಿಗೆ ಹೊಸ ಚೆಂಡಿನೊಂದಿಗೆ ಬೌಲಿಂಗ್ ದಾಳಿ ಆರಂಭಿಸುವ ಅವಕಾಶ ಪಡೆದಿದ್ದ ಅರುಣ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ವಿಫಲರಾಗಿದ್ದರು.

ಭಾರತದ ಪರ ಕೇವಲ 2 ಟೆಸ್ಟ್ ಹಾಗೂ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಂಡರ್-19 ತಂಡದಲ್ಲಿ ಶಾಸ್ತ್ರಿಯವರ ಸಹ ಆಟಗಾರನಾಗಿದ್ದರು. 1986ರಲ್ಲಿ ಶ್ರೀಲಂಕಾದ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಅರುಣ್ 76 ರನ್‌ಗೆ 3 ವಿಕೆಟ್ ಪಡೆದಿದ್ದರು. 1987-88ರಲ್ಲಿ ತಮಿಳುನಾಡು ರಣಜಿ ತಂಡದ ಪ್ರಮುಖ ಆಟಗಾರನಾಗಿದ್ದ ಅರುಣ್ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಕಾಣಿಕೆ ನೀಡಿದ್ದರು.

1986-87ರಲ್ಲಿ ನಡೆದ ಪಶ್ಚಿಮ ವಲಯ ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದಲ್ಲಿ ದಕ್ಷಿಣ ವಲಯದ ಪರ ಆಡಿದ್ದ ಅರುಣ್ ಭಾರತದ ಮಾಜಿ ಆರಂಭಿಕ ಆಟಗಾರ ಡಬ್ಲು ವಿ ರಾಮನ್ ಅವರೊಂದಿಗೆ 6ನೆ ವಿಕೆಟ್‌ಗೆ 221 ರನ್ ಜೊತೆಯಾಟ ನಡೆಸಿ ದಾಖಲೆ ನಿರ್ಮಿಸಿದ್ದರು.

ಅರುಣ್ ಈ ಹಿಂದೆ ಅಂಡರ್-19 ತಂಡ ಹಾಗೂ ಬಂಗಾಳದ ರಣಜಿ ಟ್ರೋಫಿ ತಂಡದಲ್ಲಿ ಕೋಚ್ ಆಗಿದ್ದರು. ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಬೌಲಿಂಗ್ ಕೋಚ್ ಆಗಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಕಾರ್ಯನಿರ್ವಹಿಸಿದ್ದರು. ಕಳೆದ ವಾರ ತಮಿಳುನಾಡಿನ ಪ್ರೀಮಿಯರ್ ಲೀಗ್‌ನ ತಿರುವಲ್ಲಾರ್ ವೀರನ್ಸ್ ತಂಡಕ್ಕೆ ಕೋಚ್ ಆಗಿ ಸಹಿ ಹಾಕಿದ್ದರು. ಇದೀಗ ರಾಷ್ಟ್ರೀಯ ತಂಡಕ್ಕೆ ಬೌಲಿಂಗ್ ಕೋಚ್ ಆಗಿರುವ ಕಾರಣ ಆ ಒಪ್ಪಂದ ವಜಾಗೊಂಡಿದೆ. ಅರುಣ್ ಇದೀಗ ಎರಡನೆ ಬಾರಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ರವಿ ಶಾಸ್ತ್ರಿ ಟೀಮ್ ಡೈರೆಕ್ಟರ್ ಆಗಿದ್ದಾಗ ಬೌಲಿಂಗ್ ಕೋಚ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News