ನಿಠಾರಿ ಸರಣಿ ಕೊಲೆ ಪ್ರಕರಣ: ಪಂಧೇರ್, ಕೋಲಿ ಅಪರಾಧ ಸಾಬೀತು

Update: 2017-07-22 12:54 GMT

 ಗಾಝಿಯಾಬಾದ್, ಜು.22: ನಿಠಾರಿ ಸರಣಿ ಕೊಲೆ ಎಂದೇ ಕರೆಯಲಾಗುವ ಸರಣಿ ಕೊಲೆ ಘಟನೆಗಳ ಪೈಕಿ 20ರ ಹರೆಯದ ಮಹಿಳೆಯ ಹತ್ಯೆ ಪ್ರಕರಣದಲ್ಲಿ ಉದ್ಯಮಿ ಮಣಿಂದರ್ ಸಿಂಗ್ ಪಂಧೇರ್ ಮತ್ತಾತನ ಮನೆಕೆಲಸದ ಆಳು ಸುರಿಂದ್ ಕೋಲಿ ಅವರು ದೋಷಿಗಳು ಎಂದು ಸ್ಥಳೀಯ ನ್ಯಾಯಾಲಯವೊಂದು ತೀರ್ಪಿತ್ತಿದೆ.

  ಪಂಧೇರ್ ಮತ್ತು ಕೋಲಿ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಯತ್ನ, ಕೊಲೆ ಮತ್ತು ಸಾಕ್ಷನಾಶ ಆರೋಪ ಸಾಬೀತಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಪವನ್ ತಿವಾರಿ ತೀರ್ಪು ನೀಡಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಪಂಧೇರ್‌ನನ್ನು ತೀರ್ಪು ಹೊರಬಿದ್ದೊಡನೆ ಕಸ್ಟಡಿಗೆ ಪಡೆಯಲಾಯಿತು. ಸಿಬಿಐ ತನಿಖೆ ನಡೆಸುತ್ತಿರುವ 16 ಪ್ರಕರಣಗಳ ಪೈಕಿ ಏಳರಲ್ಲಿ ಈಗಾಗಲೇ ಕೋಲಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

  ಪಂಧೇರ್‌ನನ್ನು 2009ರಲ್ಲಿ ಮತ್ತೊಂದು ಪ್ರಕರಣದಲ್ಲಿ ದೋಷಿ ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಅಲ್ಲಹಾಬಾದ್ ಹೈಕೋರ್ಟ್ ದೋಷಮುಕ್ತಗೊಳಿಸಿತ್ತು. ಅಲ್ಲದೆ ಇತರ ಮೂರು ಪ್ರಕರಣಗಳಲ್ಲೂ ಪಂಧೇರ್ ವಿಚಾರಣೆ ಎದುರಿಸುತ್ತಿದ್ದಾನೆ. ಅಪ್ರಾಪ್ತ ವಯಸ್ಸಿನ ಬಾಲಕಿಯರೂ ಸೇರಿದಂತೆ ಹಲವು ಮಹಿಳೆಯರು ನಿಗೂಢವಾಗಿ ನಾಪತ್ತೆಯಾದ ಪ್ರಕರಣ 2006ರಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಪಂಧೇರ್ ನಿವಾಸದ ಬಳಿಯ ಗಟಾರದಲ್ಲಿ ಆಸ್ತಿಪಂಜರಗಳನ್ನು ಪತ್ತೆ ಹಚ್ಚಿದ್ದರು. ಆಮಿಷವೊಡ್ಡಿ ತನ್ನ ಮನೆಗೆ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಪಂಧೇರ್, ಅಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಳಿಕ ಅವರನ್ನು ಕೊಲೆ ಮಾಡುತ್ತಿದ್ದ ಎಂದು ಸಿಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News