ಲಿಂಗಾಯತರ ಅರ್ಹತೆಯ ಕಡೆಗಣನೆ ಸರಿಯೇ?

Update: 2017-07-26 18:28 GMT

ಮಾನ್ಯರೆ,

ಪೇಜಾವರ ಸ್ವಾಮಿಗಳು ಲಿಂಗಾಯತ ಧರ್ಮ ಹಿಂದೂ ಧರ್ಮದಿಂದ ಪ್ರತ್ಯೇಕವಾಗಬಾರದು ಎಂದು ಹೇಳುತ್ತಿದ್ದಾರೆ. ಆದರೆ ಮುಗ್ಧ ಲಿಂಗಾಯತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ವೈದಿಕ ಪಕ್ಷದವರು ಲಿಂಗಾಯತರನ್ನು ಎಷ್ಟು ಹಗುರವಾಗಿ ತೆಗೆದುಕೊಂಡಿದ್ದಾರೆ ಎಂದು ಅವರಿಗೆ ಗೊತ್ತಿದೆಯೇ?

ನಮ್ಮ ನೆರೆಯ ಆಂಧ್ರದ ಮೂವರು ರಾಷ್ಟ್ರಪತಿ ಆಗಿದ್ದಾರೆ. ತಮಿಳುನಾಡಿನ ಇಬ್ಬರು ಹಾಗೂ ಕೇರಳ ಮತ್ತು ಮಹಾರಾಷ್ಟ್ರದ ಒಬ್ಬೊಬ್ಬರು ರಾಷ್ಟ್ರಪತಿ ಆಗಿದ್ದಾರೆ. ಆದರೆ ಕರ್ನಾಟಕದವರು ಈವರೆಗೆ ಒಬ್ಬರೂ ರಾಷ್ಟ್ರಪತಿ ಆಗಿಲ್ಲ, ಕೇವಲ ಬಿ.ಡಿ.ಜತ್ತಿ ಕೆಲವು ತಿಂಗಳು ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ್ದರು ಅಷ್ಟೆ. ಹಾಗಾಗಿ ಈ ಬಾರಿ ಪ್ರಣವ್ ಮುಖರ್ಜಿಯ ನಂತರ ಕನ್ನಡಿಗರೊಬ್ಬರನ್ನು ರಾಷ್ಟ್ರಪತಿ ಹುದ್ದೆಗೆ ಆರಿಸಬೇಕು, ಮೇಲಾಗಿ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರವಿದ್ದು ಅಲ್ಲಿ ಬಿಜೆಪಿ ಗೆಲ್ಲಬೇಕಾದರೆ ಲಿಂಗಾಯತರನ್ನು ಸಂತೃಪ್ತಿಗೊಳಿಸುವುದು ಅಗತ್ಯ, ಹಾಗಾಗಿ ಲಿಂಗಾಯತನೊಬ್ಬನನ್ನು ರಾಷ್ಟ್ರಪತಿ ಮಾಡಬೇಕು ಎಂದು ಕರ್ನಾಟಕದ ಕೆಲವು ನೇತಾರರು ಮೋದಿ ಮತ್ತು ಅಮಿತ್ ಶಾರಲ್ಲಿ ಕೇಳಿಕೊಂಡಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸಿದರೆಂದು ಸುದ್ದಿಯಿದೆ.

ದಕ್ಷಿಣ ಭಾರತೀಯನೊಬ್ಬನನ್ನು ಉಪರಾಷ್ಟ್ರಪತಿ ಮಾಡಬೇಕೆಂಬ ಪ್ರಸ್ತಾಪ ಬಂದಾಗಲೂ ಕನ್ನಡಿಗರನ್ನು ಇವರು ಕಡೆಗಣಿಸಲು ಕಾರಣ ಕನ್ನಡಿಗರು ತುಂಬಾ ಮೃದು ಸ್ವಭಾವದವರು ಹಾಗೂ ರಾಷ್ಟ್ರಮಟ್ಟದ ಹೊಣೆಗಾರಿಕೆ ಹೊರಲು ಅನರ್ಹರು ಎಂಬ ಕಾರಣಕ್ಕಾಗಿ!

ತೆಲುಗಿನ ವೆಂಕಯ್ಯ ನಾಯ್ಡುಗೆ ಲಿಂಗಾಯತರಿಗಿಂತ ಹೆಚ್ಚು ಅದ್ಯಾವ ಅರ್ಹತೆ ಇದೆಯೋ ಗೊತ್ತಿಲ್ಲ. ಹಾಗಿರುವಾಗ ಪೇಜಾವರರೇ, ಲಿಂಗಾಯತರು ಇನ್ನೂ ವೈದಿಕ ಪಕ್ಷದ ವೋಟ್ ಬ್ಯಾಂಕಾಗಿ ಆರೆಸ್ಸೆಸ್‌ನ ಗುಲಾಮರಾಗಿ ಮುಂದುವರಿಯಬೇಕೇ?

ಲಿಂಗಾಯತರು ತಮ್ಮ ಅರ್ಹತೆ, ರಾಷ್ಟ್ರೀಯ ವರ್ಚಸ್ಸು ಹಾಗೂ ಸ್ವತಂತ್ರ ವ್ಯಕ್ತಿತ್ವ ತೋರಿಸಲು ಇದು ಸರಿಯಾದ ಸಮಯ ತಾನೇ!

-ಮಲ್ಲಿಕಾರ್ಜುನ ಶೆಟ್ಟರ್, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News