ಶ್ರೀಮಂತ ಭಾರತದ ಕಲಾಂ ಕನಸನ್ನು ನನಸಾಗಿಸಲು ಶ್ರಮಿಸುವಂತೆ ಯುವಜನರಿಗೆ ಪ್ರಧಾನಿ ಮೋದಿ ಕರೆ

Update: 2017-07-27 13:21 GMT

ಮದುರೈ,ಜು.27: ಭಾರತವನ್ನು ಶ್ರೀಮಂತ ರಾಷ್ಟ್ರವನ್ನಾಗಿ ನೋಡುವ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಕನಸನ್ನು ಗುರುವಾರ ಯುವಜನತೆಗೆ ನೆನಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಅಭಿವೃದ್ಧಿಗಾಗಿ ಪಣ ತೊಡುವಂತೆ ಅವರಿಗೆ ಕರೆ ನೀಡಿದರು.

  ಮಾಜಿ ರಾಷ್ಟ್ರಪತಿಗಳ ತವರೂರು ರಾಮೇಶ್ವರಂನ ಪೆಯಕರಂಬು ಎಂಬಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯು 15 ಕೋ.ರೂ.ವೆಚ್ಚದಲ್ಲಿ ನಿರ್ಮಿಸಿರುವ ಡಾ.ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಸ್ಮಾರಕವನ್ನು ಅವರ ಎರಡನೇ ಪುಣ್ಯತಿಥಿಯ ಸಂದರ್ಭದಲ್ಲಿ ಅನಾವರಣಗೊಳಿಸಿ ಮಾತನಾಡುತ್ತಿದ್ದ ಮೋದಿ ಅವರು, ರಾಮೇಶ್ವರಂನ ಈ ಪವಿತ್ರ ನೆಲವು ಅಬ್ದುಲ್ ಕಲಾಂ ಅವರನ್ನು ದೇಶಕ್ಕೆ ನೀಡಿತ್ತು. ಯುವಜನರನ್ನು ಪ್ರೀತಿಸುತ್ತಿದ್ದ ಕಲಾಂ ಅವರು ಅಭಿವೃದ್ಧಿಗೊಂಡ ಭಾರತವನ್ನು ಕಾಣಲು ಬಯಸಿದ್ದರು. 2022ರಲ್ಲಿ ಭಾರತದ 75ನೇ ಸ್ವಾತಂತ್ರೋತ್ಸವ ಆಚರಿಸುವಾಗ ನಮ್ಮ ದೇಶವು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಿರಬೇಕು ಮತ್ತು ಇದಕ್ಕಾಗಿ ನಮ್ಮ ಯುವಜನರು ಪಣ ತೊಡಬೇಕು. ಪ್ರತಿಯೋರ್ವ ವ್ಯಕ್ತಿಯೂ ಒಂದು ಹೆಜ್ಜೆಯನ್ನು ಮುಂದಿಟ್ಟರೆ ಅದು ದೇಶವು ಅಭಿವೃದ್ಧಿಯತ್ತ ಮುಂದಿಟ್ಟ 125 ಕೋಟಿ ಹೆಜ್ಜೆಗಳಾಗುತ್ತವೆ. ಈ ದೇಶವು 125 ಕೋಟಿ ಜನಸಂಖ್ಯೆಯನ್ನು ಹೊಂದಿದೆ ಎಂದು ಹೇಳಿದರು.

ಸಾವಿರಾರು ವರ್ಷಗಳಿಂದಲೂ ಜನರನ್ನು ಆಕರ್ಷಿಸುತ್ತಿರುವ ರಾಮೇಶ್ವರಂ ತನ್ನದೇ ಆದ ಪ್ರಸಿದ್ಧಿಯನ್ನು ಹೊಂದಿದೆ. ಈಗ ಕಲಾಂ ಸ್ಮಾರಕವು ಈ ಪ್ರಸಿದ್ಧಿಗೆ ಪೂರಕವಾಗಲಿದೆ ಎಂದ ಅವರು, ರಾಮೇಶ್ವರಂ ಶ್ರೀರಾಮನೊಂದಿಗೆ ಗುರುತಿಸಿಕೊಂಡಿದೆ. ಇದನ್ನು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯೊಂದಿಗೆ ಸಂಪರ್ಕಿಸಲು ರಾಮೇಶ್ವರಂ-ಫೈಝಾಬಾದ್-ರಾಮೇಶ್ವರಂ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಲಾಗಿದೆ ಎಂದು ಹೇಳಿದರು. ವೀಡಿಯೊ ಕಾನ್ಫರೆನ್ಸ್ ಮೂಲಕ ಮೋದಿ ನೂತನ ರೈಲಿಗೆ ಹಸಿರು ನಿಶಾನೆ ತೋರಿಸಿದರು.

ಕಲಾಂ ಅವರ ನೆನಪಿಗಾಗಿ ಶೀಘ್ರವೇ ಸ್ಮಾರಕವೊಂದು ತಲೆಯೆತ್ತಲಿದೆ ಎಂದು ತಾನು ಭರವಸೆ ನೀಡಿದ್ದೆ. ಅದರಂತೆ ಅದಿಂದು ಅಸ್ತಿತ್ವಕ್ಕೆ ಬಂದಿದೆ. ಇದು ಕೇಂದ್ರ ಸರಕಾರದ ಸಾಧನೆಯಾಗಿದೆ ಎಂದ ಅವರು, ಒಂದು ವರ್ಷದ ಅಲ್ಪಾವಧಿಯಲ್ಲಿ ಈ ಸ್ಮಾರಕವು ನಿರ್ಮಾಣಗೊಂಡಿದೆ. ಯಾವುದೇ ಹೆಚ್ಚುವರಿ ಕೂಲಿಯನ್ನು ಬಯಸದೆ ದಿನಕ್ಕೆ ಎರಡು ಗಂಟೆಗಳ ಕಾಲ ದುಡಿದು ಇದನ್ನು ಪೂರ್ಣಗೊಳಿಸಿರುವ ಕಾರ್ಮಿಕರ ಕೊಡುಗೆಗಾಗಿ ವಂದನೆಗಳು ಎಂದರು.

‘‘ಈ ಸಂದರ್ಭದಲ್ಲಿ ಅಮ್ಮಾ(ತಮಿಳುನಾಡಿನ ಮಾಜಿ ಮುಖ್ಯಮತ್ರಿ ಜಯಲಲಿತಾ) ಅನುಪಸ್ಥಿತಿ ನನ್ನನ್ನು ಗಾಢವಾಗಿ ತಟ್ಟುತ್ತಿದೆ. ಅವರು ಇಂದು ಬದುಕಿದ್ದಿದ್ದರೆ ಈ ಸಂದರ್ಭವನ್ನು ನನಗಿಂತ ಹೆಚ್ಚು ಸಂಭ್ರಮಿಸುತ್ತಿದ್ದರು ಮತ್ತು ಕಾರ್ಮಿಕರನ್ನು ಹೆಚ್ಚು ಮೆಚ್ಚಿಕೊಳ್ಳುತ್ತಿದ್ದರು ’’ಎಂದ ಮೋದಿ,ಎದ್ದು ನಿಂತು ಕಾರ್ಮಿಕರಿಗೆ ಗೌರವಿಸುವಂತೆ ಸಭಿಕರನ್ನು ಕೋರಿದರು. ತಕ್ಷಣ ಸ್ಪಂದಿಸಿದ ಸಭಿಕರು ಕೆಲ ಕ್ಷಣಗಳ ಕಾಲ ಎದ್ದು ನಿಂತರು.

ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ರಾಜ್ಯ ಸರಕಾರವು ಸಹಕರಿಸುತ್ತಿದೆ. ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದ ಅವರು, ನೀಲಿ ಕ್ರಾಂತಿ ಯೋಜನೆಯಡಿ ರಾಮೇಶ್ವರಂನಲ್ಲಿ ಆಳ ಸಮುದ್ರ ಮೀನುಗಾರಿಕೆ ಚಾಲನೆ ನೀಡುತ್ತಿರುವುದಾಗಿ ಪ್ರಕಟಿಸಿದರು. ಇದಕ್ಕಾಗಿ 1,500 ಕೋ.ರೂ.ಗಳನ್ನು ನಿಗದಿ ಮಾಡಲಾಗಿದ್ದು, ಇದು ಮೀನುಗಾರರ ಆದಾಯವನ್ನು ಹೆಚ್ಚಿಸಲಿದೆ ಮತ್ತು ಪಾಕ್ ಜಲಸಂಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲೂ ನೆರವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News