×
Ad

120 ವರ್ಷಗಳಷ್ಟು ಹಳೆಯ ಶಿಲುಬೆ ಧ್ವಂಸ ಪ್ರಕರಣ: ದೂರು ದಾಖಲಿಸಲು ಮುಂಬೈ ನಿವಾಸಿಗಳ ನಿರ್ಧಾರ

Update: 2017-07-29 18:38 IST

ಮುಂಬೈ,ಜು.29: ಬಾಂದ್ರಾ(ಪಶ್ಚಿಮ)ದ ಡಿ’ಮಾಂಟೆ ಸ್ಟ್ರೀಟ್‌ನಲ್ಲಿದ್ದ 120 ವರ್ಷಗಳಷ್ಟು ಹಳೆಯದಾದ ವಿವಾದಾಸ್ಪದ ಶಿಲುಬೆಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಯು ನೆಲಸಮಗೊಳಿಸಿದ ಮೂರು ತಿಂಗಳ ಬಳಿಕ ಇದೀಗ ಸ್ಥಳೀಯ ನಿವಾಸಿಗಳು ಮತ್ತು ಕೆಥೊಲಿಕ್ ಗುಂಪುಗಳು ಬಿಎಂಸಿಯ ಉಪ ಆಯುಕ್ತ ಶರದ್ ಉಘಾಡೆ ಮತ್ತು ವಾರ್ಡ್ ಕಚೇರಿಯ ಇಬ್ಬರು ಇಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿ ಸಲು ನಿರ್ಧರಿಸಿದ್ದಾರೆ.

ಬಿಎಂಸಿ ಶಿಲುಬೆಯನ್ನು ತೆಗೆಯುತ್ತಿದ್ದನ್ನು ಕಂಡು ಆಘಾತವಾಗಿತ್ತು. ಮುನ್ನಾದಿನ ರಾತ್ರಿಯಷ್ಟೇ ನಮಗೆ ಬಿಎಂಸಿಯ ಯೋಜನೆಯ ಬಗ್ಗೆ ಗೊತ್ತಾಗಿತ್ತು. ಆದರೆ ನಾವು ಏನನ್ನೂ ಮಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ಸಾವಿಯೊ ಗೊನ್ಸಾಲ್ವಿಸ್ ಹೇಳಿದರು. ಶಿಲುಬೆಯಿದ್ದ ಸ್ಥಳದ ಎದುರಿನ ನಿವಾಸಿಯಾಗಿರುವ ಅವರು ಕಳೆದ 35 ವರ್ಷಗಳಿಂದಲೂ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಬಿಎಂಸಿ ಎ.29ರಂದು ಡಿ’ಮಾಂಟೆ ಶಿಲುಬೆಯನ್ನು ಧ್ವಂಸಗೊಳಿಸಿತ್ತು. ಇದನ್ನು ವಿರೋಧಿಸಿ ಕೆಥೊಲಿಕ್ ಸಮದಾಯವು ಮೇ 3ರಂದು ವಾರ್ಡ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತ್ತು. ಶಿಲುಬೆ ಕಾನೂನುಬದ್ಧವಾಗಿತ್ತು ಮತ್ತು ಖಾಸಗಿ ಜಾಗದಲ್ಲಿತ್ತು ಎಂದು ನಿವಾಸಿಗಳು ಹೇಳಿದ್ದಾರೆ.

ಬಿಎಂಸಿಯು ಶಿಲುಬೆಯನ್ನು ವರ್ಗ ‘ಬಿ’ಯ ರಚನೆ ಎಂದು ತಪ್ಪಾಗಿ ಗುರುತಿಸಿತ್ತು. ನಾವು ಪ್ರಕರಣವನ್ನು ನ್ಯಾಯಾಲಯಕ್ಕೆ ಒಯ್ದಿದ್ದೆವು, ಬಿಎಂಸಿ ಈವರೆಗೂ ನ್ಯಾಯಾಲಯ ದಲ್ಲಿ ಅಫಿದಾವತ್ತು ಸಲ್ಲಿಸಿಲ್ಲ ಎಂದು ಎನ್‌ಜಿಒ ವಾಚ್‌ಡಾಗ್ ಫೌಂಡೇಷನ್‌ನ ಟ್ರಸ್ಟಿ ಗಾಡಫ್ರೆ ಪಿಮೆಂಟ್ಸ್ ಹೇಳಿದರು.

 ಪ್ರಕರಣದ ಮುಂದಿನ ವಿಚಾರಣೆ ಉಚ್ಚ ನ್ಯಾಯಾಲಯದಲ್ಲಿ ಆ.21ರಂದು ನಡೆಯಲಿದೆ. ಬಿಎಂಸಿ ಶಿಲುಬೆಯನ್ನು ಮರುಸ್ಥಾಪಿಸಬೇಕೆಂದು ನಾವು ಬಯಸಿದ್ದೇವೆ. ಶಿಲುಬೆಯನ್ನು ತಪ್ಪಾಗಿ ಗುರುತಿಸಿದ್ದಕ್ಕಾಗಿ ಮತ್ತು ಅದನ್ನು ಧ್ವಂಸಗೊಳಿಸಿದ್ದಕ್ಕಾಗಿ ಕ್ರಿಮಿನಲ್ ಆರೋಪ ಪಟ್ಟಿ ರೂಪಿಸಲಾಗಿದೆ ಎಂದು ಬಾಂಬೆ ಕೆಥೊಲಿಕ್ ಸಭಾದ ಮುಖ್ಯಸ್ಥೆ ರೀಟಾ ಡೇ’ಸಾ ಹೇಳಿದರು.

2011ರ ಪಟ್ಟಿಯಲ್ಲಿ ಈ ಶಿಲುಬೆಯನ್ನು ಬಿ ವರ್ಗದಡಿ ಸೇರಿಸಲಾಗಿತ್ತು. ನ್ಯಾಯಾಲ ಯದ ಆದೇಶದ ಮೇರೆಗೆ ನಾವು ಕ್ರಮ ಕೈಗೊಂಡಿದ್ದೇವೆ. ಶಿಲುಬೆಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಉಘಾಡೆ ಸುದ್ದಿಸಂಸ್ಥೆಗೆ ತಿಳಿಸಿದರು.

ಬಾಂದ್ರಾ(ಪ)ದಲ್ಲಿಯ 38 ಅಕ್ರಮ ತಾಣಗಳ ಪೈಕಿ ಒಂದು ಶಿಲುಬೆಯನ್ನು ಮಾತ್ರ ನೆಲಸಮಗೊಳಿಸಲಾಗಿದೆ. ವಾರ್ಡ್ ಕಚೇರಿಯು ಗುರುವಾರ ನಾಲ್ಕು ದೇವಸ್ಥಾನಗಳನ್ನು ನೆಲಸಮಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News