ಭಯೋತ್ಪಾದಕರಿಗೆ ಆರ್ಥಿಕ ನೆರವು: ಜಮ್ಮುವಿನಲ್ಲಿ ಎನ್‌ಐಎ ಕಾರ್ಯಾಚರಣೆ
ಜಮ್ಮು, ಜು.30: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಮಂಡಳಿ(ಎನ್‌ಐಎ), ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್ ಅಲಿಶಾ ಗಿಲಾನಿ ಅವರ ನಿಕಟವರ್ತಿಗೆ ಸೇರಿದ ಕಚೇರಿ ಮತ್ತು ಮನೆಯ ಮೇಲೆ ದಾಳಿ ನಡೆಸಿದೆ.
ಗಿಲಾನಿ ಆಪ್ತ ಎನ್ನಲಾಗಿರುವ ಜಮ್ಮುವಿನ ವಕೀಲರೋರ್ವರ ಮನೆ ಮತ್ತು ಕಚೇರಿಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವಕೀಲರ ವಿದೇಶ ಪ್ರವಾಸದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಇವರನ್ನು ಶೀಘ್ರವೇ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಎನ್‌ಐಎ ಎದುರು ಬುಧವಾರ ವಿಚಾರಣೆಗೆ ಹಾಜರಾಗುವಂತೆ ಗಿಲಾನಿಯ ಎರಡನೇ ಪುತ್ರ ನಸೀಮ್‌ಗೆ ಸಮನ್ಸ್ ನೀಡಲಾಗಿದೆ. ನಸೀಮ್ ಪ್ರತ್ಯೇಕತಾವಾದಿ ಗುಂಪುಗಳ ಒಕ್ಕೂಟವಾಗಿರುವ ‘ತೆಹ್ರಿಕ್-ಎ-ಹುರಿಯತ್’ನ ಮುಖಂಡನಾಗಿದ್ದಾನೆ.
ಗಿಲಾನಿಯ ಮೊದಲ ಪುತ್ರ ನಯೀಮ್‌ಗೆ ಸೋಮವಾರ (ಜುಲೈ 31ರಂದು) ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆಯೇ ಸಮನ್ಸ್ ನೀಡಲಾಗಿದೆ. ಅಲ್ಲದೆ ಗಿಲಾನಿ ಮತ್ತು ಮಿರ್‌ವೈಝ್ ಫರೂಕ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಬಣಗಳು, ಹಿಝ್‌ಬುಲ್ ಮುಜಾಹುದೀನ್ ಮತ್ತು ಮಹಿಳೆಯರೇ ಒಳಗೊಂಡಿರುವ ದುಕ್ಥರನ್-ಎ-ಮಿಲ್ಲತ್ - ಈ ನಾಲ್ಕು ಗುಂಪುಗಳನ್ನು ಎಫ್‌ಐಆರ್‌ನಲ್ಲಿ ಹೆಸರಿಸಿದೆ.