ಮರಿಜುವಾನವನ್ನು ಕಾನೂನುಬದ್ಧಗೊಳಿಸಿ: ಮನೇಕಾ ಗಾಂಧಿ ಸಲಹೆ
ಹೊಸದಿಲ್ಲಿ, ಜು. 30: ವೈದ್ಯಕೀಯ ಉದ್ದೇಶಕ್ಕಾಗಿ ಮರಿಜುವಾನವನ್ನು ಕಾನೂನುಬದ್ಧ ಗೊಳಿಸಬೇಕು ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮನೇಕಾ ಗಾಂಧಿ ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ಮಾದಕ ದ್ರವ್ಯ ಬೇಡಿಕೆ ಇಳಿಕೆ ನೀತಿಯ ಸಂಪುಟ ಟಿಪ್ಪಣಿಯ ಕರಡನ್ನು ಪರಿಶೀಲನೆ ನಡೆಸಲು ಆಯೋಜಿಸಲಾದ ಸಚಿವ ಸಮಿತಿ ಸಭೆಯಲ್ಲಿ ಮನೇಕಾ ಗಾಂಧಿ ಈ ಸಲಹೆ ನೀಡಿದರು.
ಸಭೆಯಲ್ಲಿ ನೀಡಲಾದ ಸಣ್ಣಪುಟ್ಟ ಸಲಹೆಯೊಂದಿಗೆ ಮಾರ್ಪಡುಗೊಳಿಸಲಾದ ರಾಷ್ಟ್ರೀಯ ನೀತಿಯ ಕರಡನ್ನು ಸಚಿವರ ಸಮಿತಿ ಅನುಮೋದಿಸಿದೆ. ಈ ಬಗ್ಗೆ ನಡೆದ ಎರಡನೇ ಸಭೆಯ ನಡಾವಳಿಯ ಪ್ರತಿಯೊಂದು ಸುದ್ದಿ ಸಂಸ್ಥೆಯೊಂದಕ್ಕೆ ದೊರಕಿದ್ದು. ಇದರಲ್ಲಿ ಮನೇಕಾ ಗಾಂಧಿ ಅವರ ಸಲಹೆ ನೀಡಿರುವುದು ದಾಖಲಾಗಿದೆ. ಅಮೆರಿಕದಂತಹ ಕೆಲವು ಅಭಿವೃದ್ಧಿಶೀಲ ದೇಶಗಳಲ್ಲಿ ಮರಿಜುವಾನವನ್ನು ಕಾನೂನುಬದ್ದಗೊಳಿಸಲಾಗಿದೆ. ಇದರಿಂದ ಮಾದಕ ದ್ರವ್ಯ ಸೇವನೆ ಕಡಿಮೆ ಆಗಿದೆ. ಭಾರತದಲ್ಲಿ ಇದೇ ರೀತಿಯ ಕ್ರಮ ಅನುಸರಿಸಬಹುದು ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ವಿವರ ನೀಡುವಂತೆ ವಿನಂತಿಸಿದಾಗ, ಮನೇಕಾ ಗಾಂಧಿ, ಮರಿಜುವಾನವನ್ನು ವೈದ್ಯಕೀಯ ಉದ್ದೇಶಕಕ್ಕಾಗಿ ಕಾನೂನುಬದ್ಧಗೊಳಿಸಬೇಕು. ಮರಿಜುವಾನ ಕ್ಯಾನ್ಸರ್‌ಗೆ ಹೆಚ್ಚು ಪ್ರಯೋಜನಕಾರಿ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ಸಮಿತಿ ಸಭೆಯಲ್ಲಿ ಮನೇಕಾ ಗಾಂಧಿ, ಮಾದಕ ದ್ರವ್ಯವಾಗಿ ಕೂಡ ಬಳಕೆ ಮಾಡುತ್ತಿರುವ ಕೊಡೈನೆ ಕೆಮ್ಮಿನ ಸಿರಪ್ ಹಾಗೂ ಇನ್‌ಹಾಲೆಂಟ್‌ನಂತಹ ಫಾರ್ಮಾಸ್ಯೂಟಿಕಲ್ ಔಷಧಗಳ ಮಾರಾಟ ಹಾಗೂ ಲಭ್ಯತೆಯನ್ನು ನಿಯಂತ್ರಿಸುವ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು.
ದೇಶದಲ್ಲಿ ಮಾದಕ ದ್ರವ್ಯ ಬಳಕೆಯ ಸಮಸ್ಯೆ ಪರಿಹರಿಸಲು ಕೋರುವ ಮಾದಕ ದ್ರವ್ಯ ಬೇಡಿಕೆ ಇಳಿಕೆ ಕುರಿತ ನೀತಿಯ ಕರಡನ್ನು ಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಚಿವರ ಸಮಿತೆಗೆ ನಿರ್ದೇಶಿಸಿದ್ದರು.