×
Ad

ಶಾಸಕರ ‘ಕುದುರೆ ವ್ಯಾಪಾರ’ದ ಬಗ್ಗೆ ಕಾಂಗ್ರೆಸ್ ದೂರು: ಗುಜರಾತ್ ಸರಕಾರದಿಂದ ವರದಿ ಕೇಳಿದ ಚುನಾವಣಾ ಆಯೋಗ

Update: 2017-07-30 19:06 IST

  ಹೊಸದಿಲ್ಲಿ, ಜು.30: ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಗೊಳಿಸಲು ಬಿಜೆಪಿ ‘ಕುದುರೆ ವ್ಯಾಪಾರ’ಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ, ಈ ಕುರಿತು ತಕ್ಷಣ ವರದಿ ನೀಡುವಂತೆ ಗುಜರಾತ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಆಯೋಗ ಸೂಚಿಸಿದೆ.

ಎಲ್ಲಾ ಶಾಸಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸುವಂತೆ ಆಯೋಗ ಸರಕಾರಕ್ಕೆ ಸೂಚಿಸಿದೆ.
 ಮುಂಬರುವ ರಾಜ್ಯಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಶನಿವಾರ ದೂರು ನೀಡಿತ್ತು. ಅಲ್ಲದೆ ಶಾಸಕರ ಪಕ್ಷಾಂತರ ಪ್ರಕ್ರಿಯೆಯಲ್ಲಿ ಭಾರೀ ಮೊತ್ತದ ಹಣ ವರ್ಗಾವಣೆಯಾಗಿದ್ದು ಈ ಕುರಿತು ಉನ್ನತಮಟ್ಟದ ಸ್ವತಂತ್ರ ಸಮಿತಿಯಿಂದ ಅವಧಿಬದ್ಧ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು.

 ಗುಲಾಂ ನಬಿ ಆಝಾದ್, ಆನಂದ್ ಶರ್ಮ, ಮನೀಷ್ ತಿವಾರಿ, ಅಭಿಷೇಕ್ ಸಿಂಘ್ವಿ ಮತ್ತು ವಿವೇಕ್ ತಂಖ ಮುಂತಾದ ಮುಖಂಡರನ್ನು ಒಳಗೊಂಡ ಕಾಂಗ್ರೆಸ್ ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿದ್ದು - ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಗೊಳಿಸಲು ಹಣದ ಬಲ, ತೋಳ್ಬಲ ಮತ್ತು ಅಧಿಕಾರ ಯಂತ್ರದ ದುರುಪಯೋಗ ಆಗಿದ್ದು ಈ ಬಗ್ಗೆ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಮಿತಿಯು ಬಿಜೆಪಿಯಿಂದ ಹಣದ ಮತ್ತು ಅಧಿಕಾರದ ಆಮಿಷಕ್ಕೆ ಒಳಗಾಗಿರುವ ಎಲ್ಲಾ ಶಾಸಕರನ್ನೂ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು. ಈ ಹೇಳಿಕೆಯ ಆಧಾರದಲ್ಲಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

  ಪ್ರಚೋದನೆ ಒಡ್ಡಿರುವ, ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಮತ್ತು ಕುದುರೆ ವ್ಯಾಪಾರದಲ್ಲಿ ತೊಡಗಿರುವ ವ್ಯಕ್ತಿಗಳು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು, ಅಲ್ಲದೆ ಕಾಂಗ್ರೆಸ್ ಶಾಸಕರ ಪಕ್ಷಾಂತರ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಸಹಕರಿಸಿದ ಓರ್ವ ಪೊಲೀಸ್ ಅಧೀಕ್ಷಕ ಸೇರಿದಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾಯಿಸಬೇಕು ಎಂದು ಆದೇಶ ನೀಡುವಂತೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಮನವಿಯಲ್ಲಿ ಕೋರಲಾಗಿದೆ. ಅಲ್ಲದೆ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಅಧಿಕಾರ ಯಂತ್ರವನ್ನು ದುರುಪಯೋಗ ಪಡಿಸದಂತೆ ತಡೆಯಬೇಕು ಎಂದೂ ಕಾಂಗ್ರೆಸ್ ಆಗ್ರಹಿಸಿದೆ.

 ಗುಜರಾತ್ ಕಾಂಗ್ರೆಸ್‌ನ ಆರು ಮಂದಿ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಉಳಿದ ಶಾಸಕರನ್ನು ಬಿಜೆಪಿಯ ‘ವ್ಯಾಪ್ತಿ’ಯಿಂದ ದೂರ ಇರಿಸುವ ಉದ್ದೇಶದಿಂದ ಅವರನ್ನು ಕರ್ನಾಟಕದ ರೆಸಾರ್ಟ್ ಒಂದಕ್ಕೆ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News