ಹಿಂದುತ್ವದ ರಕ್ಷಕರಿಂದ ಮುಸ್ಲಿಂ-ದಲಿತರನ್ನು ರಕ್ಷಿಸಿ: ಮೋದಿಗೆ ನಿವೃತ್ತ ಸೇನಾಧಿಕಾರಿಗಳ ಪತ್ರ

Update: 2017-07-30 14:32 GMT

ಹೊಸದಿಲ್ಲಿ, ಜು. 30: ದೇಶದಲ್ಲಿ ಇತ್ತೀಚೆಗೆ ಮುಸ್ಲಿಮರು ಹಾಗೂ ದಲಿತರ ಮೇಲೆ ನಡೆದ ದಾಳಿಯನ್ನು ಎತ್ತಿ ತೋರಿಸಲು ಭಾರತೀಯ ಸೇನಾ ಪಡೆಯ ನಿವೃತ್ತ ಸೇನಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಸ್ವ ನಿಯೋಜಿತ ಹಿಂದುತ್ವದ ರಕ್ಷಕರು ನಡೆಸುತ್ತಿರುವ ಹಿಂಸಾಚಾರವನ್ನು ಖಂಡಿಸಿದ್ದಾರೆ. ನಾವು ನಾಟ್ ಇನ್ ಮೈ ನೇಮ್ ಅಭಿಯಾನವನ್ನು ಬೆಂಬಲಿಸುತ್ತೇವೆ ಹಾಗೂ ಸೇನಾ ಪಡೆ ವೈವಿಧ್ಯತೆಯಲ್ಲಿ ಏಕತೆ ಬೆಂಬಲಿಸುತ್ತದೆ. ದೇಶದಲ್ಲಿ ಪ್ರಸಕ್ತ ಪರಿಸ್ಥಿತಿ ಆತಂಕ, ಭೀತಿ, ಹಗೆ, ಅನುಮಾನದಿಂದ ಕೂಡಿದೆ ಎಂದು ಎಂದು ನಿವೃತ್ತ ಸೇನಾಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.

 ನಮ್ಮ ದೇಶದಲ್ಲಿ ಇಂದು ನಡೆಯುತ್ತಿರುವ ಘಟನೆಗಳು ಸೇನಾ ಪಡೆಗಳ ಮೇಲೆ ಹಾಗೂ ಸಂವಿಧಾನದ ಮೇಲೆ ನಡೆಯುತ್ತಿರುವ ಪ್ರಹಾರವಾಗಿದೆ. ಸ್ವ ನಿಯೋಜಿತ ಹಿಂದುತ್ವದ ರಕ್ಷಕರಿಂದ ನಡೆಯುತ್ತಿರುವ ದಾಳಿಗೆ ನಾವು ಸಾಕ್ಷಿಯಾಗಿದ್ದೇವೆ. ದಲಿತರು ಹಾಗೂ ಮುಸ್ಲಿಮರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

 ಮಾಧ್ಯಮ ಕೇಂದ್ರ, ನಾಗರಿಕ ಸಮಾಜದ ಗುಂಪು, ವಿಶ್ವವಿದ್ಯಾನಿಲಯಗಳು, ಪತ್ರಕರ್ತರು ಹಾಗೂ ಬುದ್ಧಿಜೀವಿಗಳನ್ನು ದೇಶ ದ್ರೋಹಿಗಳು ಎಂದು ಪ್ರಚಾರ ಮಾಡುವ ಮೂಲಕ ಹಾಗೂ ಅವರ ವಿರುದ್ಧ ನಿರಂತರ ಹಿಂಸಾಚಾರ ನಡೆಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನು ನಿಯಂತ್ರಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಪತ್ರಕ್ಕೆ ಸೇನಾ ಪಡೆಯ 114 ಮಂದಿ ನಿವೃತ್ತ ಅಧಿಕಾರಿಗಳು ಸಹಿ ಮಾಡಿದ್ದಾರೆ. ಸೇನಾ ಪಡೆ ಸೇನಾಪಡೆ, ನೌಕಾಪಡೆ, ವೈಮಾನಿಕ ಪಡೆಯನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News