ಉತ್ತರಾಖಂಡದಲ್ಲೂ ಗಡಿ ಉಲ್ಲಂಘಿಸಿದ ಚೀನಾ ಸೇನೆ

Update: 2017-07-31 14:48 GMT

ಹೊಸದಿಲ್ಲಿ, ಜು.31: ಸಿಕ್ಕಿಂ ಗಡಿಭಾಗದ ಡೋ ಕಾ ಲಾಮ್‌ನಲ್ಲಿ ಭಾರತ-ಚೀನಾ ಪಡೆಗಳ ಮಧ್ಯೆ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಚೀನಾದ ಸೇನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರಹೋತಿ ಪ್ರದೇಶದಲ್ಲಿ ಭಾರತದ ಗಡಿದಾಟಿ ಸುಮಾರು 1 ಕಿ.ಮೀ. ದೂರ ಸಾಗಿಬಂದು ಅಲ್ಲಿ ಕುರಿ ಮೇಯಿಸುತ್ತಿದ್ದವರನ್ನು ಬೆದರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 25ರಂದು ಬೆಳಿಗ್ಗೆ ಈ ಗಡಿ ಅತಿಕ್ರಮಣ ಘಟನೆ ನಡೆದಿದೆ. ಕುರಿಗಾಹಿಗಳ ಗುಂಪೊಂದು ಪಶುಗಳನ್ನು ಮೇಯಿಸುತ್ತಿದ್ದಾಗ ಏಕಾಏಕಿ ಅಲ್ಲಿಗೆ ಬಂದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ- ಚೀನಾದ ಸೇನಾಪಡೆ)ಯ ಸೈನಿಕರು ತಕ್ಷಣ ಸ್ಥಳ ಬಿಟ್ಟು ತೆರಳುವಂತೆ ಬೆದರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ 140 ಕಿ.ಮೀ ದೂರದಲ್ಲಿರುವ ಬಾರಹೋತಿ ಸುಮಾರು 80 ಚದರ ಕಿ.ಮೀ. ವ್ಯಾಪ್ತಿಯ ಹುಲ್ಲುಗಾವಲಿನ ಪ್ರದೇಶವಾಗಿದೆ. ಉ.ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಿಗೆ ಸೇರಿದ, ‘ಮಧ್ಯ ವಲಯ’ ಎಂದೇ ಕರೆಯಲಾಗುವ ಮೂರು ಗಡಿ ಠಾಣೆಗಳಲ್ಲಿ ಇದೂ ಒಂದಾಗಿದೆ. ಇದೊಂದು ‘ಸೇನಾನಿಯೋಜನೆ ರಹಿತ’ ಪ್ರದೇಶವಾಗಿದ್ದು ಇಲ್ಲಿ ಇಂಡೊ-ಟಿಬೆಟನ್ ಬೋರ್ಡರ್ ಪೊಲೀಸ್(ಐಟಿಬಿಪಿ) ಯೋಧರು ತಮ್ಮ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಾಲು ಅವಕಾಶವಿಲ್ಲ.

 ಭಾರತ ಮತ್ತು ಚೀನಾ 1958ರಲ್ಲಿ ಬಾರಹೋತಿಯನ್ನು ‘ವಿವಾದಾಸ್ಪದ ಸ್ಥಳ’ದ ಪಟ್ಟಿಗೆ ಸೇರಿಸಿದ್ದು ಈ ಪ್ರದೇಶಕ್ಕೆ ಉಭಯ ರಾಷ್ಟ್ರಗಳೂ ಸೇನೆಯನ್ನು ಕಳಿಸಬಾರದು ಎಂದು ಒಪ್ಪಿಕೊಂಡಿದ್ದವು. 1962ರ ಯುದ್ದದ ಸಂದರ್ಭ ಚೀನಾದ ಸೇನೆ ‘ಮಧ್ಯ ವಲಯ’ವನ್ನು ಪ್ರವೇಶಿಸಿರಲಿಲ್ಲ. ಪಶ್ಚಿಮ (ಲಡಾಕ್) ಮತ್ತು ಪೂರ್ವ(ಅರುಣಾಚಲ ಪ್ರದೇಶ)ವನ್ನು ಕೇಂದ್ರೀಕರಿಸಿ ಅಂದು ಯುದ್ದ ನಡೆಸಿತ್ತು. ಯುದ್ದ ಮುಗಿದ ಬಳಿಕ, ಐಟಿಬಿಪಿ ಯೋಧರು ‘ಕಾಳಗ ಮಾಡದಿರುವ’ ರೀತಿಯಲ್ಲಿ, ಅಂದರೆ ತಮ್ಮ ಬಂದೂಕುಗಳನ್ನು ಕೆಳಮುಖವಾಗಿ ಹಿಡಿದುಕೊಂಡು ಈ ಪ್ರದೇಶದಲ್ಲಿ ಗಸ್ತು ತಿರುಗಲು ಅವಕಾಶ ನೀಡಲಾಯಿತು. ಗಡಿ ವಿವಾದವನ್ನು ಬಗೆಹರಿಸುವ ಉದ್ದೇಶದಿಂದ 2000ನೇ ಇಸವಿಯ ಜೂನ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಬಾರಹೋತಿ, ಕೌರಿಲ್ ಮತ್ತು ಹಿಮಾಚಲಪ್ರದೇಶದ ಶಿಪ್ಕಿ- ಈ ಮೂರು ಪ್ರದೇಶಗಳಲ್ಲಿ ಐಟಿಬಿಪಿ ಪಡೆಗಳು ಶಸ್ತ್ರಾಸ್ತ್ರ ಹೊಂದಿರುವುದಿಲ್ಲ ಎಂದು ಭಾರತ ಏಕಪಕ್ಷೀಯವಾಗಿ ಒಪ್ಪಿಕೊಂಡಿತ್ತು.

ಬಾರಹೋತಿ ಹುಲ್ಲುಗಾವಲು ಪ್ರದೇಶದಲ್ಲಿ ಐಟಿಬಿಪಿ ಯೋಧರು ಸೇನೆಯ ಸಮವಸ್ತ್ರ ಧರಿಸದೆ ಗಸ್ತು ತಿರುಗುತ್ತಾರೆ. ಈ ಹಚ್ಚ ಹಸಿರು ಹುಲ್ಲುಗಾವಲಿನಲ್ಲಿ ಭಾರತದ ಕುರಿಗಾಹಿಗಳ ಜೊತೆಗೆ ಟಿಬೆಟ್‌ನ ನಾಗರಿಕರೂ ಸೇರಿಕೊಂಡು ತಮ್ಮ ‘ಯಾಕ್’ಗಳನ್ನು ಮೇಯಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News