×
Ad

‘ಬ್ಲೂ ವೇಲ್’ ಆತ್ಮಹತ್ಯೆಗೆ ಮುನ್ನ ತನ್ನ ‘ಅಂತಿಮ ಚಿತ್ರ’ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಮುಂಬೈ ಬಾಲಕ

Update: 2017-08-02 21:40 IST

ಮುಂಬೈ,ಆ.2: ‘ಬ್ಲೂ ವೇಲ್’ ಆತ್ಮಹತ್ಯೆ ಆನ್‌ಲೈನ್ ಆಟದ ತನ್ನ ಅಂತಿಮ ‘ಟಾಸ್ಕ್’ನ್ನು ಪೂರೈಸಲು ಬಹುಮಹಡಿ ಕಟ್ಟಡದಿಂದ ಕೆಳಕ್ಕೆ ಹಾರುವ ನಿಮಿಷಗಳ ಮುನ್ನ ಮುಂಬೈನ 14ರ ಹರೆಯದ ಬಾಲಕ ತನ್ನ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಮತ್ತು ಅದನ್ನು ತನ್ನ ‘ಅಂತಿಮ ಚಿತ್ರ’ಎಂದು ಬಣ್ಣಿಸಿದ್ದ.

ಶನಿವಾರ ಅಂಧೇರಿಯಲ್ಲಿನ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಈ ಒಂಭತ್ತನೆಯ ತರಗತಿಯ ವಿದ್ಯಾರ್ಥಿಯು ಸೋಮವಾರ ಶಾಲೆಯಲ್ಲಿ ತನ್ನನ್ನು ಸ್ನೇಹಿತರು ನೋಡುವುದಿಲ್ಲ ಎಂದೂ ತನ್ನ ಸಂದೇಶದಲ್ಲಿ ತಿಳಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಬುಧವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಅದೇ ಕಟ್ಟಡದಿಂದ ತೆಗೆಯಲಾಗಿರುವ ಚಿತ್ರವು ಬಾಲಕ ಅಡ್ಡಗೋಡೆಯ ಮೇಲೆ ಕುಳಿತಿರುವುದನ್ನು ತೋರಿಸುತ್ತಿದೆ. ಬಾಲಕನ ಹಿಂದೆ ಕಟ್ಟಡದ ಎತ್ತರ ಮೂಡುವಂತೆ ಕೋನದಲ್ಲಿ ಮೊಬೈಲ್ ಕ್ಯಾಮರಾವನ್ನು ಹೊಂದಿಸಲಾಗಿತ್ತು.

ಇದು ಭಾರತದಲ್ಲಿ ‘ಬ್ಲೂ ವೇಲ್’ ಆತ್ಮಹತ್ಯೆ ಸವಾಲಿಗೆ ಸಂಬಂಧಿಸಿದ ಮೊದಲ ಸಾವೇ ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಬಾಲಕನ ಮೊಬೈಲ್ ಫೋನ್‌ನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಬಾಲಕನ ಸಾವಿನ ಬಗ್ಗೆ ಸರಕಾರವು ತನಿಖೆ ನಡೆಸಲಿದೆ ಎಂದು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಇದು ಆನ್‌ಲೈನ್ ಆಟವಾಗಿರುವುದರಿಂದ ನಿಯಂತ್ರಿಸಬಹುದಾಗಿದೆ. ಅಗತ್ಯ ಕ್ರಮಕ್ಕಾಗಿ ರಾಜ್ಯ ಸರಕಾರವು ಕೇಂದ್ರದ ಸಮನ್ವಯದೊಂದಿಗೆ ಕಾರ್ಯಾಚರಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News