ಏಷ್ಯನ್ ಶಾಟ್‌ಗನ್ ಟೂರ್ನಿ: ಅಂಕುರ್ ಮಿತ್ತಲ್‌ಗೆ ಬಂಗಾರದ ಪದಕ

Update: 2017-08-05 18:11 GMT

ಹೊಸದಿಲ್ಲಿ, ಆ.5: ಭಾರತದ ಶೂಟರ್ ಅಂಕುರ್ ಮಿತ್ತಲ್ ಏಳನೆ ಆವೃತ್ತಿಯ ಏಷ್ಯನ್ ಶಾಟ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ವೈಯಕ್ತಿಕ ಚಿನ್ನದ ಪದಕ ಜಯಿಸಿದರು. ಮಾತ್ರವಲ್ಲ ಭಾರತ ಟೀಮ್ ವಿಭಾಗದಲ್ಲಿ ಚಿನ್ನ ಜಯಿಸಲು ನೆರವಾದರು.

ಕಝಕಿಸ್ತಾನದ ಅಸ್ತಾನಾದಲ್ಲಿ ಶನಿವಾರ ನಡೆದ ಡಬಲ್ ಟ್ರ್ಯಾಪ್‌ನ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 71 ಅಂಕ ಗಳಿಸಿದ ಮಿತ್ತಲ್ ಮೊದಲ ಸ್ಥಾನ ಪಡೆದರು. ಯುಎಇಯ ಖಾಲಿದ್ ಅಲ್ಕಾಬಿ(70) ಹಾಗೂ ಸೈಫ್ ಅಲ್‌ಶಾಮ್ಸಿ(53) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು. ಫೈನಲ್‌ನಲ್ಲಿ ಒಟ್ಟು ಆರು ಶೂಟರ್‌ಗಳು ಸ್ಪರ್ಧಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಸಂಗ್ರಾಮ್ ದಾಹಿಯಾ(43) ಹಾಗೂ ಮುಹಮ್ಮದ್ ಅಸಾಬ್(34) ನಾಲ್ಕನೆ ಹಾಗೂ ಐದನೆ ಸ್ಥಾನ ಪಡೆದಿದ್ದರು. ಮಿತ್ತಲ್‌ರ ಫೈನಲ್ ಅಂಕಕ್ಕೆ ದಾಹಿಯಾ ಹಾಗೂ ಅಸಾಬ್ ಗಳಿಸಿದ್ದ ಅಂಕ ಸೇರ್ಪಡೆಗೊಳಿಸಿದ ಹಿನ್ನೆಲೆಯಲ್ಲಿ ಭಾರತ ಟೀಮ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆಯಲು ಸಫಲವಾಯಿತು. ಈ ವರ್ಷಾರಂಭದಲ್ಲಿ ಮೆಕ್ಸಿಕೊದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ವಿಶ್ವಕಪ್‌ನಲ್ಲಿ ಮಿತ್ತಲ್ ಚಿನ್ನದ ಪದಕ ಜಯಿಸಿದ್ದರು. ಹೊಸದಿಲ್ಲಿಯಲ್ಲಿ ನಡೆದಿದ್ದ ಶೂಟಿಂಗ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News