800 ವರ್ಷಗಳ ಹಿಂದಿನ ಆವೆಮಣ್ಣಿನ ಮಡಕೆಯಲ್ಲಿದ್ದ ವಸ್ತುವನ್ನು ನೋಡಿ ಬೆರಗಾದರು ವಿಜ್ಞಾನಿಗಳು

Update: 2017-08-11 10:12 GMT

ಕೆನಡಾದ ಪುರಾತತ್ವ ಶಾಸ್ತ್ರಜ್ಞರು ಅಮೆರಿಕದ ವಿಸ್ಕಿನ್‌ಸಿನ್‌ನ ಗ್ರೀನ್ ಬೇ ಸಮೀಪದ ಮೆನೊಮಿನಿ ಮೀಸಲು ಪ್ರದೇಶದಲ್ಲಿ ಉತ್ಖನನ ನಡೆಸಿದಾಗ ಅವರಿಗೆ ಆವೆಮಣ್ಣಿನ ಮಡಕೆಯೊಂದು ದೊರಕಿತ್ತು. ಅದನ್ನು ತೆರೆದು ನೋಡಿದ ಅವರಿಗೆ ಅಚ್ಚರಿ ಕಾದಿತ್ತು. ಶತಮಾನಗಳ ಹಿಂದೆಯೇ ಅಳಿದಿದೆ ಎಂದು ನಂಬಲಾದ ಅತ್ಯಂತ ವಿಶಿಷ್ಟ ತಳಿಯ ಕುಂಬಳಕಾಯಿಯ ಬೀಜಗಳು ಅದರಲ್ಲಿದ್ದವು. ಮಡಕೆಯನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗೊಳಪಡಿಸಿದಾಗ ಅದು 850 ವರ್ಷಗಳಷ್ಟು ಹಳೆಯದು ಎನ್ನುವುದು ಬೆಳಕಿಗೆ ಬಂದಿತ್ತು.

ಈ ಅಚ್ಚರಿ ಮೂಡಿಸಿದ್ದ, ಅಂಡಾಕಾರದ ಬೀಜಗಳು ವಾಸ್ತವದಲ್ಲಿ ಅಮೆರಿಕದ ಮೂಲನಿವಾಸಿಗಳು ಬೆಳೆಯುತ್ತಿದ್ದ, ಈಗ ಅಳಿದುಹೋಗಿರುವ ವಿಶಿಷ್ಟ ಕುಂಬಳಕಾಯಿ ಯದಾಗಿದ್ದು, ಅವರು ಅವುಗಳನ್ನು ಟೆನ್ನಿಸ್ ಬಾಲ್ ಗಾತ್ರದ ಆವೆಮಣ್ಣಿನ ಮಡಕೆಯಲ್ಲಿಟ್ಟು ಭೂಮಿಯಲ್ಲಿ ಹುಗಿದು ಸಂರಕ್ಷಿಸಿದ್ದರು.

ಕೆನಡಾದ ವಿನ್ನಿಪೆಗ್‌ನ ಮೆನೊನೈಟ್ ವಿವಿಯ ವಿದ್ಯಾರ್ಥಿಗಳು ಕುತೂಹಲದಿಂದ ಈ ಬೀಜಗಳನ್ನು ನೆಲದಲ್ಲಿ ಉತ್ತಿದ್ದರು. 850 ವರ್ಷಗಳಷ್ಟು ಹಳೆಯದಾದ ಈ ಬೀಜಗಳಿಂದ ಸಸಿಗಳು ಚಿಗುರಿದಾಗ ಆ ವಿದ್ಯಾರ್ಥಿಗಳು ತಮ್ಮ ಕಣ್ಣುಗಳನ್ನೇ ನಂಬಿರಲಿಲ್ಲ. ಅಷ್ಟೊಂದು ಹಳೆಯ ಬೀಜಗಳು ಈಗಿನ ವಾತಾವರಣದಲ್ಲಿ ಮೊಳಕೆಯೊಡೆಯಬಹುದೆಂದು ಅವರು ನಿರೀಕ್ಷಿಸಿರಲಿಲ್ಲ. 

ಸಸಿಗಳು ಬೆಳೆದು ಕೆಲವೇ ತಿಂಗಳುಗಳಲ್ಲಿ 25 ಅಡಿಗೂ ಹೆಚ್ಚಿನ ಉದ್ದದ ಬಳ್ಳಿಗಳಾಗಿದ್ದವು ಮತ್ತು ಉದ್ದನೆಯ ಆಕಾರದ, ಉಜ್ವಲ ಕಿತ್ತಳೆ ಬಣ್ಣದ ಎರಡು ಡಝನ್‌ಗಳಷ್ಟು ಕುಂಬಳಕಾಯಿಗಳಾಗಿದ್ದವು. ಈ ಪೈಕಿ ಅತ್ಯಂತ ದೊಡ್ಡ ಕುಂಬಳಕಾಯಿ ಮೂರು ಅಡಿಗಳಷ್ಟು ಉದ್ದವಿದ್ದು, ಬರೋಬ್ಬರಿ 18 ಪೌಂಡ್ ತೂಗುತ್ತಿತ್ತು ಎಂದು ಶಿಕಾಗೋದ ಅಮೆರಿಕನ್ ಇಂಡಿಯನ್ ಸೆಂಟರ್‌ನ ಸುಸಾನ್ ಮೆಂಝೆಲ್ ತಿಳಿಸಿದರು.

ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ತಾವು ಬೆಳೆದ ಕುಂಬಳಕಾಯಿಯ ಪಲ್ಯವನ್ನು ಮಾಡಿ ತಿಂದಾಗ ಅದು ಅದ್ಭುತವಾದ ರುಚಿಯನ್ನು ಹೊಂದಿತ್ತು.

ಉಳಿದಿದ್ದ ಬೀಜಗಳನ್ನು ಪಾರಂಪರಿಕ ಬೀಜಗಳನ್ನು ಉಳಿಸುವ ಮತ್ತು ಅಮೆರಿಕ ಹಾಗೂ ಕೆನಡಾಗಳ ಮೂಲನಿವಾಸಿಗಳ ಆಹಾರ ಸ್ವಾತಂತ್ರದ ರಕ್ಷಣೆಯ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿನೋನಾ ಲಾ ಡ್ಯೂಕ್ ಮತ್ತು ಮೂಲನಿವಾಸಿಗಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಇತರ ಸಂಸ್ಥೆಗಳಿಗೆ ವಿತರಿಸಲಾಗಿದೆ. ಈ ಜಗತ್ತಿನಿಂದ ಅಳಿದು ಹೋಗಿದೆ ಎಂದು ನಂಬಲಾಗಿದ್ದ ಈ ವಿಶಿಷ್ಟ ಕುಂಬಳಕಾಯಿ ತಳಿಗೆ ಮತ್ತೊಮ್ಮೆ ಜೀವ ನೀಡುವ ಉದ್ದೇಶ ಇದರ ಹಿಂದಿದೆ.

ಆಗಿನ ಮೂಲನಿವಾಸಿಗಳು ಈ ಕುಂಬಳಕಾಯಿಯನ್ನು ಪ್ರಮುಖ ಆಹಾರವಾಗಿ ಬಳಸುತ್ತಿದ್ದರು ಎಂದು ಗಾರ್ಡನ್ ಆಫ ಲರ್ನಿಂಗ್‌ನ ಬ್ರಯಾನ್ ಎಟ್ಕಿನ್ ಹೇಳಿದ್ದಾರೆ.

ವಿದ್ಯಾರ್ಥಿಗಳು, ಸಂಸ್ಥೆಗಳು ಮತ್ತು ಸಮುದಾಯಗಳ ಪ್ರಯತ್ನದಿಂದ ಈ ಪುರಾತನ ಕುಂಬಳಕಾಯಿ ‘ಗೆಟೆ-ಒಕೊಸೋಮಿನ್’ ಸದ್ಯೋಭವಿಷ್ಯದಲ್ಲಿ ನಮ್ಮ ಊಟದ ಬಟ್ಟಲಿನಲ್ಲಿ ಕಾಣಿಸಿಕೊಳ್ಳಬಹುದು.

ಕೃಪೆ :www.ntd.tv

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News