ಸಿಕ್ಕಿಂ,ಅರುಣಾಚಲ ಪ್ರದೇಶಗಳ ಚೀನಾ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿದ ಭಾರತ

Update: 2017-08-11 17:59 GMT

ಹೊಸದಿಲ್ಲಿ,ಆ.11: ಡೋಕಾ ಲಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚೀನಾದ ಹೆಚ್ಚುತ್ತಿರುವ ಬೆದರಿಕೆಗಳ ನಡುವೆಯೇ ಪ್ರಮುಖವಾದ ವ್ಯೆಹಾತ್ಮಕ ನಡೆಯನ್ನಿಟ್ಟಿರುವ ಭಾರತವು ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಚೀನಾಕ್ಕೆ ಹೊಂದಿಕೊಂಡಿರುವ ಗಡಿಯುದ್ದಕ್ಕೂ ತನ್ನ ಸೈನಿಕರ ನಿಯೋಜನೆಯನ್ನು ಹೆಚ್ಚಿಸಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಇದೇ ವೇಳೆ ಸೈನಿಕರಲ್ಲಿ ‘ಎಚ್ಚರಿಕೆಯ ಮಟ್ಟ’ವನ್ನೂ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ಪರಿಸ್ಥಿತಿಯ ಸಮಗ್ರ ವಿಶ್ಲೇಷಣೆಯ ಬಳಿಕ ಮತ್ತು ಡೋಕಾ ಲಾ ಕುರಿತಂತೆ ಭಾರತದ ವಿರುದ್ಧ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಪರಿಗಣಿಸಿ ಸಿಕ್ಕಿಂನಿಂದ ಅರುಣಾಚಲ ಪ್ರದೇಶದವರೆಗಿನ ಸುಮಾರು 1,400 ಕಿ.ಮೀ.ಉದ್ದದ ಭಾರತ-ಚೀನಾ ಗಡಿಯುದ್ದಕ್ಕೂ ಸೈನಿಕರ ನಿಯೋಜನೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅನಾಮಿಕರಾಗುಳಿ ಯಲು ಬಯಸಿರುವ ಈ ಅಧಿಕಾರಿಗಳು ತಿಳಿಸಿದರು.

ಸುಕ್ನಾದಲ್ಲಿರುವ ಸೇನೆಯ 33 ಕಾರ್ಪ್ಸ್ ಮತ್ತು ಅರುಣಾಚಲ ಪ್ರದೇಶ ಹಾಗೂ ಅಸ್ಸಾಮಗಳಲ್ಲಿರುವ 3 ಮತ್ತು 4 ಕಾರ್ಪ್ಸ್‌ಗಳಿಗೆ ಸೂಕ್ಷ್ಮ ಭಾರತ-ಚೀನಾ ಗಡಿ ರಕ್ಷಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

ಹೆಚ್ಚಿಸಲಾಗಿರುವ ಸೈನಿಕರ ಸಂಖ್ಯೆ ಅಥವಾ ಶೇಕಡಾವಾರು ಪ್ರಮಾಣದ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿದ ಅಧಿಕಾರಿಗಳು, ‘ಕಾರ್ಯಾಚರಣೆ ವಿವರಗಳನ್ನು’ ತಾವು ಬಹಿರಂಗ ಪಡಿಸುವಂತಿಲ್ಲ ಎಂದು ಹೇಳಿದರು.

ರಕ್ಷಣಾ ತಜ್ಞರು ಹೇಳುವಂತೆ ಪ್ರತಿಕೂಲ ಹವಾಮಾನಕ್ಕೆ ಒಗ್ಗುವಿಕೆ ತರಬೇತಿಯನ್ನು ಪೂರ್ಣಗೊಳಿಸಿರುವ ಸಿಬ್ಬಂದಿಗಳು ಸೇರಿದಂತೆ ಸಾಮಾನ್ಯವಾಗಿ ಸುಮಾರು 45,000 ಸೈನಿಕರನ್ನು ಯಾವುದೇ ಸಂದರ್ಭದಲ್ಲಿಯೂ ಲಭ್ಯವಿರುವಂತೆ ಗಡಿ ಪ್ರದೇಶದಲ್ಲಿ ಸನ್ನದ್ಧರಾಗಿರಿಸಲಾಗುತ್ತದೆ. ಆದರೆ ಎಲ್ಲರನ್ನೂ ಗಡಿಯಲ್ಲಿ ನಿಯೋಜಿಸಲಾಗಿರುವುದಿಲ್ಲ.

9,000 ಅಡಿಗಳಷ್ಟು ಎತ್ತರದ ಪ್ರದೇಶದಲ್ಲಿ ನಿಯೋಜಿತ ಸೈನಿಕರು 14 ದಿನಗಳ ಅವಧಿಯ ಪ್ರತಿಕೂಲ ಹವಾಮಾನಕ್ಕೆ ಒಗ್ಗಿಕೊಳ್ಳುವ ತರಬೇತಿಗೆ ಒಳಗಾಗಬೇಕಾಗುತ್ತದೆ.

ಆದರೆ ಭಾರತ-ಚೀನಾ-ಭೂತಾನ ಗಡಿಗಳು ಸಂಧಿಸುವ ಡೋಕಾ ಲಾದಲ್ಲಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಜೂ.16ರಂದು ಆ ಪ್ರದೇಶದಲ್ಲಿ ರಸ್ತೆ ನಿರ್ಮಾಣದ ಚೀನಿ ಸೈನಿಕರ ಪ್ರಯತ್ನವನ್ನು ಸ್ಥಗಿತಗೊಳಿಸಿದ ಬಳಿಕ ಅಲ್ಲಿ ಸುಮಾರು 350 ಭಾರತೀಯ ಸೈನಿಕರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News