ಗೋರಖ್‌ಪುರ ದುರಂತ ‘ಆಡಳಿತಾತ್ಮಕ ವೈಫಲ್ಯ’: ಐಎಂಎ

Update: 2017-08-13 17:06 GMT

ಹೊಸದಿಲ್ಲಿ, ಆ.13: ಗೋರಖ್‌ಪುರ ದುರಂತಕ್ಕೆ ಆಡಳಿತಾತ್ಮಕ ವೈಫಲ್ಯ ಕಾರಣವಾಗಿರುವುದರಿಂದ ಇದಕ್ಕೆ ಎಲ್ಲರೂ ಹೊಣೆಗಾರರು. ಆದ್ದರಿಂದ ಬಾಬಾ ರಾಘವ್‌ದಾಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ರಾಜೀವ್ ಮಿಶ್ರರನ್ನು ಅಮಾನತುಗೊಳಿಸಿರುವುದು ಸರಿಯಲ್ಲ ಎಂದು ಭಾರತೀಯ ವೈದ್ಯಕೀಯ ಸಂಘಟನೆ(ಐಎಂಎ) ತಿಳಿಸಿದೆ.

ಕೇವಲ ಪ್ರಾಂಶುಪಾಲರನ್ನು ಅಮಾನತುಗೊಳಿಸಿರುವ ಕ್ರಮ ಸಂಪೂರ್ಣ ತಪ್ಪು. ಅವರನ್ನು ಅಮಾನತು ಮಾಡುವುದಾದರೆ, ಸ್ಥಳೀಯಾಡಳಿತದ ಅಧಿಕಾರಿಯನ್ನೂ ಅಮಾನತುಗೊಳಿಸಿ ಸಂಸ್ಥೆಯ ಮೇಲೆ ನಿಷೇಧ ಹೇರಬೇಕು ಎಂದು ಐಎಂಎ ಅಧ್ಯಕ್ಷ ಕೆ.ಕೆ.ಅಗರ್‌ವಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 ಆಮ್ಲಜನಕದ ಕೊರತೆಯೇ ದುರಂತಕ್ಕೆ ಕಾರಣವೇ ಎಂಬ ಬಗ್ಗೆ ನಿಜಾಂಶವನ್ನು ಸಮುದಾಯದವರಿಗೆ ಹಾಗೂ ವೈದ್ಯಕೀಯ ಸಂಘಟನೆಗಳಿಗೆ ತಿಳಿಸಬೇಕು. ಅಲ್ಲದೆ ಪ್ರಾಂಶುಪಾಲರನ್ನು ಅಮಾನತುಗೊಳಿಸಿರುವುದು ಸರಿಯಾದ ಕ್ರಮವಲ್ಲ. ಹಾಗೂ ಆರೋಗ್ಯಕ್ಷೇತ್ರದಲ್ಲಿ ಪಾವತಿ ವಿಳಂಬ ಮಾಡುವ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

  ಈ ಮಧ್ಯೆ , ಪ್ರಾಂಶುಪಾಲರ ಅಮಾನತು ಕ್ರಮವನ್ನು ಮುಖ್ಯಮಂತ್ರಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ. ಆಮ್ಲಜನಕ ಸರಬರಾಜು ಮಾಡುವವರು ಆಗಸ್ಟ್ 1ರಂದು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ. ಇದನ್ನು ವೈದ್ಯಕೀಯ ಶಿಕ್ಷಣದ ಪ್ರಧಾನ ನಿರ್ದೇಶಕರ ಕಚೇರಿಗೆ ಆ.4ರಂದು ಕಳಿಸಲಾಗಿದ್ದು ಆ.5ರಂದು ಹಣ ಮಂಜೂರಾಗಿದೆ. ಸೂಕ್ತ ಸಮಯದಲ್ಲೇ ಹಣ ಮಂಜೂರಾಗಿದೆ. ಮಂಜೂರಾಗಿರುವ ಹಣ ಅಲ್ಲಿಗೆ ತಲುಪಿರುವಾಗ, ಅದನ್ನು ತಲುಪಿಸದೆ ಇರುವುದು ಯಾರ ತಪ್ಪು. ಇಲ್ಲಿ ಕರ್ತವ್ಯ ನಿರ್ವಹಣೆಯ ಕುರಿತು ಪ್ರಾಂಶುಪಾಲರ ನಿರ್ಲಕ್ಷ ಸ್ಪಷ್ಟವಾಗಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್‌ಗಳ ಕೊರತೆ ಇರುವುದನ್ನು ದಾಖಲೆ ಪುಸ್ತಕದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News