×
Ad

ಯುಜಿಸಿ, ಎಐಸಿಟಿಇ ಬದಲಿಗೆ ಏಕಸಂಸ್ಥೆ: ಕೇಂದ್ರ ಸರಕಾರದ ಯೋಜನೆ ನನೆಗುದಿಗೆ

Update: 2017-08-13 23:02 IST

ಹೊಸದಿಲ್ಲಿ, ಆ. 14: ಮಾನವ ಸಂಪನ್ಮೂಲ ಸಚಿವಾಲಯ ತನ್ನ ಚಿಂತನೆಗೆ ಮೂರ್ತ ರೂಪ ನೀಡದೇ ಇರುವ ಹಿನ್ನೆಲೆಯಲ್ಲಿ ಯುಜಿಸಿ ಹಾಗೂ ಎಐಸಿಟಿಇ ಬದಲಾಗಿ ಉನ್ನತ ಶಿಕ್ಷಣ ನಿಯಂತ್ರಿಸಲು ಏಕ ಸಂಸ್ಥೆ ಜಾರಿಗೆ ತರುವ ಕೇಂದ್ರ ಸರಕಾರದ ಯೋಜನೆ ನನೆಗುದಿಗೆ ಬಿದ್ದಂತೆ ಕಾಣುತ್ತಿದೆ. ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸುವುದನ್ನು ತಡೆಯುವುದು ಹಾಗೂ ಅನಗತ್ಯ ನಿರ್ಬಂಧಗಳನ್ನು ನಿವಾರಿಸುವ ಉದ್ದೇಶವನ್ನು ಹೊಂದಿರುವ ಉನ್ನತ ಶಿಕ್ಷಣ ಸಬಲೀಕರಣ ನಿಯಂತ್ರಣ ಸಂಸ್ಥೆ ಅಥವಾ ಎಚ್‌ಇಇಆರ್‌ಎಯನ್ನು ಪರಿಚಯಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಆದರೆ, ಮಾನವ ಸಂಪನ್ಮೂಲ ಸಚಿವಾಲಯದ ನಿಧಾನಗತಿಯಿಂದ ಯೋಜನೆ ತ್ರಿಶಂಕು ಸ್ಥಿತಿಗೆ ತಲುಪಿದೆ.

ಸಂಸತ್ತಿನಲ್ಲಿ ಈ ವಿಷಯದ ಕುರಿತಂತೆ ಪ್ರಶ್ನೆ ಎತ್ತಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿಯ ರಾಜ್ಯ ಸಚಿವ ಉಪೇಂದ್ರ ಕುಶ್ವಾಹಾ, ಈ ವಿಷಯಕ್ಕೆ ಸಂಬಂಧಿಸಿ ಪ್ರಸ್ತುತ ಯಾವುದೇ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ ಎಂದರು.

ಯುಜಿಸಿ ಹಾಗೂ ಎಐಸಿಟಿಇಯನ್ನು ಸಂಘಟಿಸಿ ಏಕ ಉನ್ನತ ಶಿಕ್ಷಣ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರುವಂತಹ ಪ್ರಸ್ತಾಪ ಸದ್ಯ ಪರಿಶೀಲನೆಯಲ್ಲಿ ಇಲ್ಲ ಎಂದು ಕುಶ್ವಾಹ ಹೇಳಿದರು.

ಇದರ ಬಗ್ಗೆ ಪ್ರಶ್ನಿಸಿದಾಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News