×
Ad

ಸ್ವಾತಂತ್ರ್ಯೋತ್ಸವ ದಿನಾಚರಣೆ ನಿರ್ದೇಶನ ತಿರಸ್ಕರಿಸಿದ ಪ.ಬಂಗಾಲ ಸರಕಾರ

Update: 2017-08-14 18:43 IST

ಹೊಸದಿಲ್ಲಿ, ಆ.14: ಕೇಂದ್ರ ಮಾನವ ಸಂಪನ್ಮೂಲ (ಎಚ್‌ಆರ್‌ಡಿ) ಸಚಿವಾಲಯ ನಿಗದಿಪಡಿಸಿದ ನಮೂನೆಯಲ್ಲಿ ಸ್ವಾತಂತ್ರೋತ್ಸವ ದಿನವನ್ನು ಆಚರಿಸಬಾರದು ಎಂದು ಪಶ್ಚಿಮ ಬಂಗಾಲ ಸರಕಾರ ಎಲ್ಲಾ ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ತುರ್ತು ಸೂಚನೆ ರವಾನಿಸಿದೆ.

 ಪಶ್ಚಿಮ ಬಂಗಾಲದ ಜನತೆ ದೇಶಪ್ರೇಮದ ಬಗ್ಗೆ ಬಿಜೆಪಿಯಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದಿರುವ ರಾಜ್ಯದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಇನ್ನೊಬ್ಬರು ಯಾವ ರೀತಿ ಸ್ವಾತಂತ್ರೋತ್ಸವ ಆಚರಿಸಬೇಕು ಎಂದು ಆದೇಶಿಸಲು ಕೇಂದ್ರಕ್ಕೆ ಹಕ್ಕಿಲ್ಲ ಎಂದು ಹೇಳಿದರು. ನಾವೇನೂ ಕೇಂದ್ರದ ಪ್ರಸ್ತಾವನೆಯನ್ನು ವಿರೋಧಿಸಲೇಬೇಕೆಂದು ಪಣತೊಟ್ಟಿಲ್ಲ. ಆದರೆ ನಮ್ಮದೇ ರೀತಿಯಲ್ಲಿ ಸ್ವಾತಂತ್ರ ದಿನವನ್ನು ಆಚರಿಸುತ್ತೇವೆ ಎಂದು ಹೇಳುತ್ತಿದ್ದೇವೆ. ಕೇಂದ್ರದ ವಿಶೇಷ ನಿರ್ದೇಶನದ ಅಗತ್ಯವಿಲ್ಲ . ಯಾಕೆಂದರೆ ಅದರಲ್ಲಿ ಸೂಚಿಸಲಾಗಿರುವ ಬಹುತೇಕ ಅಂಶಗಳು ಶಿಕ್ಷಣ ಸಂಸ್ಥೆಗಳಲ್ಲಿ ಈಗ ಆಚರಿಸಲಾಗುತ್ತಿರುವ ಸ್ವಾತಂತ್ರೋತ್ಸವದಲ್ಲಿ ಒಳಗೊಂಡಿದೆ ಎಂದವರು ಹೇಳಿದರು.

   ಆದರೆ ಟಿಎಂಸಿ ನಿಲುವನ್ನು ಟೀಕಿಸಿರುವ ಬಿಜೆಪಿ, ಕೇಂದ್ರ ಸರಕಾರದ ನಿರ್ದೇಶನವನ್ನು ಉಲ್ಲಂಘಿಸಿಸುವ ಪ್ರಕರಣವನ್ನು ‘ ರಾಷ್ಟ್ರವಿರೋಧಿ ’ ಕೃತ್ಯದಡಿ ಪರಿಗಣಿಸಬಹುದಾಗಿದೆ ಎಂದು ತಿಳಿಸಿದೆ. ಕೆಲವೊಂದು ಗೊಂದಲಕಾರಿ ಪ್ರವೃತ್ತಿಗಳು ಗೋಚರಿಸುತ್ತಿವೆ. ಪ.ಬಂಗಾಲವು ಭಾರತದ ಭಾಗವೇ ಅಲ್ಲ ಎಂಬ ರೀತಿ ರಾಜ್ಯ ಸರಕಾರ ವರ್ತಿಸುತ್ತಿದೆ. ಪ್ರತಿಯೊಂದು ಕಾನೂನು ಮತ್ತು ನಿಯಮವನ್ನು ಧಿಕ್ಕರಿಸುವ ರೀತಿಯ ಈ ವರ್ತನೆ ಅಪಾಯಕಾರಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ರಾಜ್ಯ ಸರಕಾರದ ನಿರ್ಧಾರ ದುರದೃಷ್ಟಕರ ಎಂದಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್, ಇದರಿಂದ ಆಘಾತವಾಗಿದೆ. ಆದರೆ ವಿವೇಕಕ್ಕೇ ಗೆಲುವಾಗಲಿದೆ ಎಂದು ಆಶಿಸುವುದಾಗಿ ತಿಳಿಸಿದರು.

ಸ್ವಾತಂತ್ರೋತ್ಸವ ಆಚರಣೆ ಅಥವಾ ಕ್ವಿಟ್ ಇಂಡಿಯಾ ದಿನಾಚರಣೆ ಆಚರಿಸುವಂತೆ ಇಲಾಖೆ ಯಾರನ್ನೂ ಬಲವಂತ ಮಾಡಿಲ್ಲ. ಆದರೂ ಎಲ್ಲರೂ ಸೂಚನೆಯನ್ನು ಸ್ವಪ್ರೇರಣೆಯಿಂದ ಪಾಲಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.

 ‘ಸರ್ವ ಶಿಕ್ಷ ಅಭಿಯಾನ’ದ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ ಸಂಗ್ರಾಮದ ಕುರಿತ ರಸಪ್ರಶ್ನೆ, ಚರ್ಚಾ ಸ್ಪರ್ಧೆ ಇತ್ಯಾದಿಗಳನ್ನು ಆಯೋಜಿಸುವಂತೆ ಕಳೆದ ತಿಂಗಳು ಎಚ್‌ಆರ್‌ಡಿ ಸಚಿವಾಲಯವು ಎಲ್ಲಾ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ರವಾನಿಸಿತ್ತು.

  ಈ ಮಧ್ಯೆ, ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಸರಕಾರವು, ಸ್ವಾತಂತ್ರೋತ್ಸವದ ದಿನದಂದು ರಾಜ್ಯದ ಎಲ್ಲಾ ಮದರಸಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಅಲ್ಲದೆ ಮದರಸದ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಮತ್ತು ಅದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಬೇಕು ಎಂದು ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಧಾರ್ಮಿಕ ಮುಖಂಡರು, 1947ರಿಂದಲೂ ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭ ಮದರಸಗಳಲ್ಲಿ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಲಾಗುತ್ತಿದೆ. ಆದ್ದರಿಂದ ‘ಕೇವಲ ತಮಗಾಗಿ’ ಈ ರೀತಿಯ ವಿಶೇಷ ಆದೇಶದ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News