ಎನ್‌ಎಚ್‌ಆರ್‌ಸಿಯಿಂದ ಉ.ಪ್ರ. ಸರಕಾರಕ್ಕೆ ನೋಟಿಸ್

Update: 2017-08-14 14:00 GMT

ಹೊಸದಿಲ್ಲಿ,ಆ.14: ಗೋರಖ್‌ಪುರದ ಸರಕಾರಿ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಸಂಭವಿಸಿದ 80 ಮಕ್ಕಳ ಸಾವಿಗೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಸೋಮವಾರ ಉತ್ತರಪ್ರದೇಶ ಸರಕಾರಕ್ಕೆ ಸೋಮವಾರ ನೋಟಿಸ್ ಕಳುಹಿಸಿದೆ. ಆರೋಗ್ಯ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಘೋರವಾದ ನಿರ್ಲಕ್ಷವುಂಟಾಗಿದೆಯೆಂದು ಅದು ಅಭಿಪ್ರಾಯಿಸಿದೆ.

 ಮಕ್ಕಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳ ಪರಿಹಾರ ಹಾಗೂ ಪುನರ್ವಸತಿ ಬಗ್ಗೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂಬ ಬಗ್ಗೆ ನಾಲ್ಕು ವಾರಗಳೊಳಗೆ ವಿಸ್ತೃತವಾದ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

 ಆಗಸ್ಟ್ 7ರಿಂದೀಚೆಗೆ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕನಿಷ್ಠ 80 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಪೈಕಿ ಹಲವರು ಆಮ್ಲಜನಕದ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಪ್ರಾಣಕಳೆದುಕೊಂಡಿದ್ದಾರೆ. ತನಗೆ ಬಾಕಿ ಹಣಪಾವತಿಸಿಲ್ಲವೆಂಬ ಕಾರಣಕ್ಕಾಗಿ ಪೂರೈಕೆದಾರ ಸಂಸ್ಥೆಯು ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು.

ದ್ರವರೂಪದ ಆಮ್ಲಜನಕದ ಪೂರೈಕೆಯಲ್ಲಿ ಉಂಟಾದ ನಿರ್ಲಕ್ಷವೇ ಈ ದುರಂತಕ್ಕೆ ಕಾರಣವೆಂದು ಹಲವಾರು ಮಾದ್ಯಮಗಳು ವರದಿಗಳನ್ನು ಪ್ರಕಟಿಸಿರುವುದನ್ನು ಗಮನಕ್ಕೆ ತೆಗೆದುಕೊಂಡು ಮಾನವಹಕ್ಕು ಆಯೋಗವು ಸ್ವಯಂಪ್ರೇರಿತವಾಗಿ ನೋಟಿಸ್ ಜಾರಿಗೊಳಿಸಿದೆ.

ಸರಕಾರವು ನಡೆಸುತ್ತಿರುವ ಆಸ್ಪತ್ರೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿರುವುದು ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆಯೋಗವು ನೋಟಿಸ್‌ನಲ್ಲಿ ತಿಳಿಸಿದೆ.

  ಈ ಮೊದಲು ಕೂಡಾ ಗೋರಖ್‌ಪುರದ ಬಿ.ಆರ್.ಡಿ. ಆಸ್ಪತ್ರೆಯಲ್ಲಿ ಜಪಾನಿ ಮೆದುಳುಜ್ವರದಿಂದಾಗಿ ಹಲವಾರು ಸಾವಿನ ಪ್ರಕರಣಗಳು ವರದಿಯಾಗಿರುವ ಬಗ್ಗೆಯೂ ಎನ್‌ಎಚ್‌ಆರ್‌ಸಿ ಗಮನಸೆಳೆದಿದೆ.

  ಜಪಾನಿ ಮೆದುಳುಜ್ವರದಿಂದಾಗಿ ರಾಜ್ಯದಲ್ಲಿ ಸಾವುಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಸೇರಿದಂತೆ ಉತ್ತರಪ್ರದೇಶ ಸರಕಾರದ ಹಿರಿಯ ಅಧಿಕಾರಿಗಳ ಜೊತೆ ಇತ್ತೀಚೆಗೆ ಲಕ್ನೋದಲ್ಲಿ ನಡೆದ ಆಯೋಗವು ಬೈಠಕ್‌ನಲ್ಲಿ ಚರ್ಚಿಸಲಾಗಿತ್ತು.ಆಗಸ್ಟ್ 9ರಿಂದ 11ರವರೆಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ರಾಜ್ಯ ಸರಕಾರವು ಭರವಸೆಗಳನ್ನು ನೀಡಿರುವ ಹೊರತಾಗಿಯೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲವೆಂದು ಆಯೋಗವು ಅಭಿಪ್ರಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News