ನಾವು ನಾಚಿಕೆಯಿಂದ ತಲೆತಗ್ಗಿಸಬೇಕಾದ ಗೋರಖ್‌ಪುರದ ‘ವೈದ್ಯಕೀಯ ನರಮೇಧ’

Update: 2017-08-15 18:32 GMT

ಮಾನ್ಯರೆ,

ಉತ್ತರ ಪ್ರದೇಶದ ಗೋರಖ್‌ಪುರದ ಸರಕಾರಿ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿರುವ ಭೀಕರ ‘ವೈದ್ಯಕೀಯ ನರಮೇಧ’ವು ನಮ್ಮನ್ನೆಲ್ಲ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಬೇಕು.

ಸರಕಾರಿ ಆಸ್ಪತ್ರೆಗಳಿಗೆ ಪ್ರಮುಖ ಸಾಮಗ್ರಿಗಳ ಪೂರೈಕೆಯ ಬಿಲ್‌ಗಳು ಅಥವಾ ಅಂತಹ ಸಾಮಗ್ರಿಗಳ ಪೂರೈಕೆಗಾಗಿ ಸಲ್ಲಿಸಲಾಗಿರುವ ಟೆಂಡರ್‌ಗಳನ್ನು ಅಧಿಕಾರಿಗಳು ತಮ್ಮ ಅಂಡಿನ ಬುಡದಲ್ಲಿಟ್ಟುಕೊಂಡು ಕುಳಿತುಕೊಳ್ಳುವುದು ಈ ದೇಶದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಗುತ್ತಿಗೆದಾರರು ಅಧಿಕಾರಿಗಳ ಲಂಚದ ಬೇಡಿಕೆಗೆ ಮಣಿಯದಿದ್ದರೆ ಇಂತಹ ಬಿಲ್‌ಗಳು ಪಾವತಿಯಾಗುವುದಿಲ್ಲ, ಟೆಂಡರ್‌ಗಳು ಹಾಗೆಯೇ ಬಿದ್ದುಕೊಂಡಿರುತ್ತವೆ. ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಎಷ್ಟರ ಮಟ್ಟಿಗೆ ಕೆಟ್ಟಿದೆಯೆಂದರೆ ರೋಗಿಗಳು ಕಾಸು ಬಿಚ್ಚದ ಹೊರತು ಅವರಿಗೆ ಚಿಕಿತ್ಸೆ ದೊರೆಯುವುದಿಲ್ಲ. ಸಾರ್ವಜನಿಕ ಬೊಕ್ಕಸದ ಹಣದಿಂದ ಖರೀದಿಸಲಾದ ಜೀವರಕ್ಷಕ ಔಷಧಿಗಳನ್ನು ರೋಗಿಗಳಿಗೆ ಒದಗಿಸುವ ಬದಲು ಖಾಸಗಿ ಔಷಧಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತದೆ. ರೋಗಿಗಳಿಗೆ ಪೂರೈಕೆಯಾಗಬೇಕಾದ ಬನ್ ಮತ್ತು ಬ್ರೆಡ್‌ಗಳನ್ನು ಆಸ್ಪತ್ರೆಯ ಸಿಬ್ಬಂದಿ ತಮ್ಮ ಮನೆಗಳಿಗೆ ಸಾಗಿಸುತ್ತಾರೆ. ಗರ್ಭಿಣಿಯರಿಗೆ ಸಹಜ ಹೆರಿಗೆಯಾಗುವ ಸಾಧ್ಯತೆಗಳಿದ್ದರೂ ಖಾಸಗಿ ಆಸ್ಪತ್ರೆಗಳ ಋಣದಲ್ಲಿರುವ ಸರಕಾರಿ ಆಸ್ಪತ್ರೆಗಳ ವೈದ್ಯರು ಸಿಸೇರಿಯನ್‌ಗಾಗಿ ಅಲ್ಲಿಗೆ ಕಳುಹಿಸುತ್ತಾರೆ. ಜೈವಿಕ-ವೈದ್ಯಕೀಯ ತ್ಯಾಜ್ಯಗಳನ್ನು ಸುಟ್ಟುಹಾಕಲು ಇನ್ಸಿನರೇಟರ್ ಗಳಿದ್ದರೂ ಸಿಬ್ಬಂದಿಯ ಕೈವಾಡದಿಂದಾಗಿ ಅವು ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿರುವುದಿಲ್ಲ ಮತ್ತು ಗ್ಯಾರೇಜುಗಳಿಗೆ ಹತ್ತಿ ಮತ್ತು ಬ್ಯಾಂಡೇಜ್ ಬಟ್ಟೆಗಳನ್ನು ಮರುಮಾರಾಟ ಮಾಡುವ ಕಬಾಡಿವಾಲಾಗಳಿಗೆ ಈ ಜೈವಿಕ-ವೈದ್ಯಕೀಯ ತ್ಯಾಜ್ಯವನ್ನು ಮಾರಾಟ ಮಾಡಲಾಗುತ್ತದೆ. ಪ್ಲಾಸ್ಟಿಕ್ ಟ್ಯೂಬ್‌ಗಳು ಮತ್ತು ಬ್ಯಾಗ್‌ಗಳನ್ನು ಇಟ್ಟಿಗೆ ಗೂಡುಗಳಿಗೆ ಪೂರೈಸಲಾಗುತ್ತದೆ. ಇನ್ನೂ ಘೋರವೆಂದರೆ ಬಳಕೆಯಾದ ಸಿರಿಂಜ್‌ಗಳೂ ಸಂಸ್ಕರಣೆಗೊಳ್ಳದೆ ಮರುಬಳಕೆಯಾಗುತ್ತವೆ!

ದುರದೃಷ್ಟವೆಂದರೆ ನಮ್ಮ ಮಾಧ್ಯಮಗಳು ಇವೆಲ್ಲ ಆಸ್ಪತ್ರೆಯ ನಿರ್ಲಕ್ಷ ಎಂದು ಷರಾ ಬರೆದು ಸುಮ್ಮನಾಗಿಬಿಡುತ್ತವೆ. ವಾಸ್ತವದಲ್ಲಿ ಇದು ನಾವು ಮೂಲ ಆರೋಗ್ಯ ಸೌಕರ್ಯ ಕ್ಷೇತ್ರದಲ್ಲಿ ಖಾಸಗಿ ಉದ್ಯಮಿಗಳನ್ನು ಉತ್ತೇಜಿಸುತ್ತಿರುವುದಕ್ಕೆ ತೆರುತ್ತಿರುವ ದುಬಾರಿ ಬೆಲೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೈತುಂಬ ಸಂಬಳ ಪಡೆಯುವ ವೈದ್ಯರಂತೆ ತಾವೂ ಹಣ ಗಳಿಸುವ ದುರಾಸೆಯಿಂದ ಸರಕಾರಿ ಆಸ್ಪತ್ರೆಗಳಲ್ಲಿಯ ಹೆಚ್ಚಿನ ವೈದ್ಯರು ವೈದ್ಯಕೀಯವಾಗಿ ಅನೈತಿಕವಾಗಿರುವ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ. ಇದರ ಪರಿಣಾಮ ನಮ್ಮ ಕಣ್ಣುಗಳ ಮುಂದೆಯೇ ಇದೆ.

ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ‘ವೈದ್ಯಕೀಯ ನರಮೇಧ’ ನಡೆದ ಬಿಆರ್‌ಡಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆಂಬ ಸಣ್ಣ ನಿರೀಕ್ಷೆಯಿತ್ತು. ಆದರೆ ಅವರಿಗೆ ಆರೆಸ್ಸೆಸ್ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಘರ್ಷಣೆಗಳಲ್ಲಿ ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ದೂರದ ಕೇರಳಕ್ಕೆ ತೆರಳುವುದು ಮುಖ್ಯವಾಗಿತ್ತು. ರಾಜಧಾನಿ ದಿಲ್ಲಿಗೆ ಸಮೀಪದಲ್ಲಿಯೇ ಭೀಕರ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಇದು ನಮ್ಮ ಮಹಾನ್ ಭಾರತ!

ಎಂ.ಎ.ಸಿರಾಜ್, ಜೆ.ಸಿ.ನಗರ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News