ಆ.21ರಿಂದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌

Update: 2017-08-20 18:16 GMT

   ಹೊಸದಿಲ್ಲಿ, ಆ.20: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಸೊಮವಾರ ಆರಂಭವಾಗಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದ ಪಿ.ವಿ.ಸಿಂಧು ಮತ್ತು ಉತ್ತಮ ಫಾರ್ಮ್‌ನಲ್ಲಿರುವ ಕೆ. ಶ್ರೀಕಾಂತ್ ಚಿನ್ನದ ಪದಕದ ಬೇಟೆಯನ್ನು ಮುಂದುವರಿಸಲಿದ್ದಾರೆ.

ಭಾರತದ 21 ಮಂದಿ ಆಟಗಾರರು ಪದಕದ ಬೇಟೆಗೆ ಹೊರಟಿದ್ದಾರೆ.ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯ ಓಪನ್‌ನಲ್ಲಿ ಚಾಂಪಿಯನ್ ಆಗಿ ಪ್ರಶಸ್ತಿ ಬಾಚಿಕೊಂಡಿದ್ದ ಶ್ರೀಕಾಂತ್ ಇದೀಗ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಯೋಜನೆಯಲ್ಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದ ಸಿಂಧು ಅವರು 2016ರಲ್ಲಿ ಚೀನಾ ಓಪನ್ ಮತ್ತು 2017ರಲ್ಲಿ ಇಂಡಿಯಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದವರು. ಇದಕ್ಕಿಂತಲೂ ಪ್ರಾಮುಖ್ಯವಾದ ವಿಚಾರವೆಂದರೆ ಸಿಂಧು 2013 ಮತ್ತು 2014ರ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಸತತ ಕಂಚು ಪಡೆದವರು.

  ಶ್ರೀಕಾಂತ್ ಸತತ ಮೂರು ಟೂರ್ನಮೆಂಟ್‌ಗಳಲ್ಲಿ ಫೈನಲ್ ಪ್ರವೇಶಿಸಿದ್ದರು. ಇದೀಗ ಸ್ಕಾಟ್ಲೆಂಡ್‌ನಲ್ಲಿ ಪದಕದ ಬೇಟೆಗೆ ಸಜ್ಜಾಗಿದ್ದಾರೆ. 2015ರ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದ ಸೈನಾ ನೆಹ್ವಾಲ್ ಇದೀಗ ಫಿಟ್‌ನೆಸ್ ಸಮಸ್ಯೆ ಎದುರಿಸಿದ್ದಾರೆ. ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಸಿಂಧು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

 ಸಿಂಧು ಕೊರಿಯಾದ ಕಿಮ್ ಹ್ಯೂ ಮಿನ್ ಅಥವಾ ಈಜಿಪ್ಟ್‌ನ ಹಾದಿಯಾ ಹೊಸ್ನಿ ಅವರನ್ನು ಎರಡನೆ ಸುತ್ತಿನಲ್ಲಿ ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಸನ್ ಜಿ ಯು ಅವರನ್ನು ಎದುರಿಸುವುದನ್ನು ನಿರೀಕ್ಷಿಸಲಾಗಿದೆ.

 2015ರ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪಡೆದ ಸೈನಾ ಅವರು ಸ್ವಿಸ್‌ನ ಸಬರಿನಾ ಜಾಕ್ಯುಟ್ ಮತ್ತು ಉಕ್ರೈನ್‌ನ ನಟಾಲಿಯಾ ವೊಯ್ಟಿಸೆಕ್‌ರನ್ನು ಎದುರಿಸಲಿದ್ದಾರೆ.

 ಸೈನಾಗೆ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಕೊರಿಯಾದ ಎರಡನೆ ಶ್ರೇಯಾಂಕದ ಸಂಗ್ ಜಿ ಹ್ಯೂನ್ ಸವಾಲು ಎದುರಾಗುವ ಸಾಧ್ಯತೆ ಇದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಬಾರಿ ಭಾರತದ ಬ್ಯಾಡ್ಮಿಂಟನ್ ಆಟಗಾರರ ಪ್ರಾಬಲ್ಯ ಇದೆ. ಭಾರತದ ಪುರುಷ ಆಟಗಾರರು ಪ್ರಸಕ್ತ ಸಾಲಿನಲ್ಲಿ 6 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಬಿ. ಸಾಯ್ ಪ್ರಣೀತ್ ಅವರು ಸಿಂಗಾಪುರ ಓಪನ್ ಮತ್ತು ಸಮೀರ್ ವರ್ಮಾ ಲಕ್ನೋದಲ್ಲಿ ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಪ್ರಶಸ್ತಿ ಜಯಿಸಿದ್ದರು. ಅಲ್ಲದೆ ಪ್ರಣೀತ್ ಥಾಯ್‌ಲ್ಯಾಂಡ್ ಗ್ರಾನ್ ಪ್ರಿ ಗೋಲ್ಡ್ ಗೆದ್ದುಕೊಂಡಿದ್ದರು.

ಸಿಂಗಾಪುರ ಓಪನ್ ಸೂಪರ್ ಸಿರೀಸ್‌ನಲ್ಲಿ ಶ್ರೀಕಾಂತರನ್ನು ಮಣಿಸಿ ಚೊಚ್ಚಲ ಚಾಂಪಿಯನ್ ಆಗಿರುವ ಬಿ. ಸಾಯ್ ಪ್ರಣೀತ್ ಅವರು ಹಾಂಕಾಂಗ್‌ನ ವೈ ನಾನ್ ರನ್ನು ಮತ್ತು ಅಜಯ್ ಜಯರಾಮ್ ಅವರು ಆಸ್ಟ್ರೀಯದ ಲುಕಾ ರಾಬರ್ ಅವರನ್ನು ಪ್ರಥಮ ಸುತ್ತಿನಲ್ಲಿ ಎದುರಿಸಲಿರುವರು.

 ವಿಶ್ವ ಚಾಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಆಡುತ್ತಿರುವ ಸಮೀರ್ ವರ್ಮಾ ಅವರಿಗೆ ಸ್ಪೇನ್‌ನ ಪಾಬ್ಲೊ ಅಬಿಯಾನ್ ಸವಾಲು ಎದುರಾಗಲಿದೆ.

  ಶ್ರೀಕಾಂತ್ ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯ ಚಾಂಪಿಯನ್ ಮತ್ತು ಸಿಂಗಾಪುರ ಓಪನ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ. ಅವರ ನೇತೃತ್ವದ ತಂಡಕ್ಕೆ ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ನಂ.5 ಚೆನ್ ಲಾಂಗ್, ವಿಶ್ವದ ನಂ.1 ಸನ್ ವಾನ್ ಹೊ, ಲೀ ಚಾಂಗ್ ವೇ, ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸೆನ್, ಚೀನಾದ ಶಿ ಯೂಕಿ, ಮತ್ತು ಐದು ಬಾರಿ ವಿಶ್ವ ಚಾಂಪಿಯನ್ ಜಯಿಸಿದ ಲಿನ್ ಡಾನ್ ಸವಾಲು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎದುರಾಗಲಿದೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ರುತುಪರ್ಣ ದಾಸ್ ಅವರು ಫಿನ್‌ಲ್ಯಾಂಡ್‌ನ ಏರಿ ಮಿಕ್ಕಿಲಾರನ್ನು ಮೊದಲ ಸುತ್ತಿನಲ್ಲಿ ಎದುರಿಸುವರು. ತನ್ವಿ ಲಾಡ್ ಅವರು ಇಂಗ್ಲೆಂಡ್‌ನ ಕ್ಲೋಯ್ ಬರ್ಚ್‌ರನ್ನು ಎದುರಿಸಲಿದ್ದಾರೆ.

   ವಿಶ್ವದ ನಂ. 1 ಥಾಯ್ ಝು -ಯಿಂಗ್ ಈ ಬಾರಿ ಸ್ಪರ್ಧೆಯಲ್ಲಿ ಇಲ್ಲ. ಎರಡು ಬಾರಿ ಚಾಂಪಿಯನ್ ನಂ.3 ಕರೋಲಿನಾ ಮರೀನ್ ಅವರ ಸವಾಲನ್ನು ಸೈನಾ ಮತ್ತು ಸಿಂಧು ಎದುರಿಸಬೇಕಾಗಿದೆ. ವಿಶ್ವದ ನಂ.2 ಜಪಾನ್‌ನ ಅಕಾನೆ ಯಮಗುಚಿ ಮತ್ತು ನಂ.3 ದಕ್ಷಿಣ ಕೊರಿಯಾದ ಸಂಗ್ ಜಿ ಹ್ಯೂನ್ ಸವಾಲು ಎದುರಾಗುವ ಸಾಧ್ಯತೆ ಇದೆ.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ , ಚಿರಾಗ್ ಸೆನ್ ಮತ್ತು ಸಾತ್ವೀಕ್ ಸಾಯ್‌ರಾಜ್ ರಾಂಕಿರೆಡ್ಡಿ , ಅರ್ಜುನ್ ಎಂ.ಆರ್ ಮತ್ತು ರಾಮಚಂದ್ರನ್ ಶ್ಲೋಕ್ ಕಣದಲ್ಲಿದ್ದಾರೆ.

  ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕೀ, ಮೆಘಾನ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್.ರಾಮ್, ಸಂಜನಾ ಸಂತೋಷ್ ಮತ್ತು ಆರತಿ ಸಾರಾ ಸುನೀಲ್ ಸಜ್ಜಾಗಿದ್ದಾರೆ.

 ಮಿಶ್ರ ಡಬಲ್ಸ್‌ನಲ್ಲಿ ಸುಮೀತ್ ಮತ್ತು ಅಶ್ವಿನಿ ಪೊನ್ನಪ್ಪ, ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕೀ ರೆಡ್ಡಿ , ಸಾತ್ವೀಕ್ ಮತ್ತು ಮನೀಶ .ಕೆ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News