ರಾಷ್ಟ್ರಗೀತೆ ಪ್ರಸಾರದ ಸಂದರ್ಭ ಎದ್ದುನಿಲ್ಲದ ಆರೋಪ: ಮೂವರು ಕಾಶ್ಮೀರಿ ಯುವಕರ ಬಂಧನ

Update: 2017-08-21 14:05 GMT

 ಹೈದರಾಬಾದ್, ಆ.21: ನಗರದ ಥಿಯೇಟರ್ ಒಂದರಲ್ಲಿ ಸಿನೆಮಾ ಪ್ರದರ್ಶನ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಿದಾಗ ಎದ್ದುನಿಲ್ಲಲಿಲ್ಲ ಎಂಬ ಆರೋಪದಲ್ಲಿ ಮೂವರು ಕಾಶ್ಮೀರಿ ಯುವಕರನ್ನು ಬಂಧಿಸಿದ ಘಟನೆ ಶನಿವಾರ ನಡೆದಿದೆ. ಜಮೀಲ್ ಗುಲ್, ಉಮರ್ ಫಯಾಝ್ ಮತ್ತು ಮುದಬ್ಬಿರ್ ಶಬ್ಬೀರ್ ಎಂಬವರು ಶನಿವಾರ ಅಟ್ಟಾಪುರ್ ಎಂಬ ಗ್ರಾಮದಲ್ಲಿರುವ ಚಿತ್ರ ಮಂದಿರಕ್ಕೆ ಸಿನೆಮಾ ವೀಕ್ಷಿಸಲೆಂದು ತೆರಳಿದ್ದರು. ಸಿನೆಮಾ ಪ್ರದರ್ಶನ ಆರಂಭಕ್ಕೂ ಮೊದಲು ರಾಷ್ಟ್ರಗೀತೆ ಪ್ರಸಾರ ಮಾಡಿದಾಗ ಕೋರ್ಟ್ ಆದೇಶದಂತೆ ಎಲ್ಲರೂ ಎದ್ದುನಿಂತು ಗೌರವ ಸೂಚಿಸಿದರು. ಆದರೆ ಈ ಮೂವರು ಎದ್ದುನಿಲ್ಲಲಿಲ್ಲ ಎಂದು ಹೇಳಲಾಗಿದೆ.

ಸಿನೆಮ ವೀಕ್ಷಿಸಲು ಆಗಮಿಸಿದ್ದ ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಇದನ್ನು ಗಮನಿಸಿ ರಾಜೇಂದ್ರನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಯಡಿ ಬಂಧಿಸಿದ್ದಾರೆ . ಥಿಯೇಟರ್‌ನ ಆಡಳಿತವರ್ಗ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಂಧಿತ ಯುವಕರನ್ನು ಠಾಣೆಗೆ ಒಯ್ದು ಹಲವು ತಾಸುಗಳ ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಯುವಕರು ವಾಸ್ತವ್ಯದಲ್ಲಿದ್ದ ಟೋಲಿ ಚೌಕಿ ಎಂಬಲ್ಲಿರುವ ಮನೆಗೆ ತೆರಳಿದ ಪೊಲೀಸರು ಅಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ತಾವು ಚೆವೆಲ್ಲದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು , ಥಿಯೇಟರ್‌ನಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವಾಗ ಎದ್ದುನಿಲ್ಲಬೇಕೆಂಬ ಆದೇಶದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಈ ಯುವಕರು ತಿಳಿಸಿದ್ದಾರೆ. ಅಲ್ಲದೆ ಇದೇ ಪ್ರಥಮ ಬಾರಿ ತಾವು ಥಿಯೇಟರ್‌ನಲ್ಲಿ ಸಿನೆಮಾ ವೀಕ್ಷಣೆಗೆ ಬಂದಿರುವುದಾಗಿಯೂ ಯುವಕರು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News