ನಾವು ಗಡಿ ದಾಟಿ ಬಂದರೆ ಕೋಲಾಹಲವಾದೀತು: ಭಾರತಕ್ಕೆ ಚೀನಾ ಎಚ್ಚರಿಕೆ

Update: 2017-08-22 13:09 GMT

ಬೀಜಿಂಗ್, ಆ.22: ಡೋಕಾ ಲಾ ವಿಷಯದಲ್ಲಿ ಭಾರತವು ಅಪಾಯಕಾರಿ ನಡೆ ಇರಿಸಿದೆ ಎಂದು ವ್ಯಾಖ್ಯಾನಿಸಿರುವ ಚೀನಾ, ಒಂದು ವೇಳೆ ತನ್ನ ಸೇನೆ ಭಾರತದೊಳಗೆ ಪ್ರವೇಶಿಸಿದರೆ ಕೋಲಾಹಲವಾದೀತು ಎಂದು ಭಾರತವನ್ನು ಎಚ್ಚರಿಸಿದೆ.

ಚೀನಾ ರಸ್ತೆ ನಿರ್ಮಿಸುತ್ತಿದೆ ಎಂಬ ನೆಪದಲ್ಲಿ ಭಾರತೀಯ ಸೇನೆ ಸಿಕ್ಕಿಂನಲ್ಲಿ ಗಡಿಉಲ್ಲಂಘಿಸಿ ಚೀನಾದ ಭೂಪ್ರದೇಶವನ್ನು ಪ್ರವೇಶಿಸಿದೆ. ಇದೊಂದು ಹಾಸ್ಯಾಸ್ಪದ, ಅಪಾಯಕಾರಿ ನಡೆಯಾಗಿದ್ದು ಉದ್ದೇಶ ಸ್ಪಷ್ಟವಾಗಿದೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಹುವಾ ಚುನ್‌ಯಿಂಗ್ ಹೇಳಿದ್ದಾರೆ.

 ಭಾರತವು ಗಡಿಭಾಗದಲ್ಲಿ ನಡೆಸುವ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಯಿಂದ ನಮ್ಮ ಭದ್ರತೆಗೆ ಆತಂಕವಿದೆ ಎಂದು ಕಾರಣ ನೀಡಿ ನಾವು ಭಾರತದ ಗಡಿಯೊಳಗೆ ಪ್ರವೇಶಿಸಿದರೆ ಕೋಲಾಹಲವಾಗದೇ ಎಂದವರು ಪ್ರಶ್ನಿಸಿದ್ದಾರೆ.

 ಕಳೆದ ವಾರ ಪಶ್ಚಿಮ ಹಿಮಾಲಯದ ಲಡಾಕ್ ಗಡಿಭಾಗದಲ್ಲಿ ಭಾರತ-ಚೀನಾ ಪಡೆಗಳ ನಡುವೆ ಉಂಟಾದ ಘರ್ಷಣೆಗೆ ಭಾರತ ಕಾರಣ ಎಂದು ಚುನ್‌ಯಿಂಗ್ ಸೋಮವಾರ ದೂಷಿಸಿದ್ದರು. ಈ ಘರ್ಷಣೆಯ ವೇಳೆ ಉಭಯ ಪಡೆಗಳ ಯೋಧರು ಪರಸ್ಪರ ಕಲ್ಲೆಸೆತ ನಡೆಸುತ್ತಿರುವ ವೀಡಿಯೊ ದೃಶ್ಯಾವಳಿ ಪ್ರಸಾರವಾಗಿತ್ತು.

 ಜೂನ್‌ನಲ್ಲಿ ಸಿಕ್ಕಿಂ ಗಡಿಭಾಗದ ಬಳಿಯ ಡೋಕಾ ಲಾ ಎಂಬಲ್ಲಿ ಚೀನಾದ ಪಡೆ ರಸ್ತೆ ನಿರ್ಮಿಸಲು ಮುಂದಾದಾಗ ಭಾರತದ ಸೇನೆ ಇದಕ್ಕೆ ತಡೆಯೊಡ್ಡಿತ್ತು. ತ್ರಿರಾಷ್ಟ್ರ ಗಡಿಸಂಧಿಸುವ (ಭಾರತ-ಚೀನಾ-ಭೂತಾನ್) ಈ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದರೆ ರಾಷ್ಟ್ರದ ಭದ್ರತೆಗೆ ತೀವ್ರ ಆತಂಕವಿದೆ ಎಂಬುದು ಭಾರತದ ನಿಲುವಾಗಿದೆ.

ಆದರೆ ತನ್ನದೇ ನೆಲದಲ್ಲಿ ರಸ್ತೆ ನಿರ್ಮಿಸಲು ತನಗೆ ಹಕ್ಕಿದೆ ಎಂದು ಚೀನಾ ಹೇಳುತ್ತಿದೆ. ಇದನ್ನು ಭೂತಾನ್ ಮತ್ತು ಭಾರತ ಒಪ್ಪಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News