×
Ad

ತ್ರಿವಳಿ ತಲಾಖ್: ಐದು ಧರ್ಮಗಳ ಐವರು ನ್ಯಾಯಾಧೀಶರು ಹೇಳಿದ್ದೇನು?

Update: 2017-08-22 18:47 IST

ಹೊಸದಿಲ್ಲಿ: ಮುಸ್ಲಿಮರಲ್ಲಿಯ ತ್ರಿವಳಿ ತಲಾಖ್ ಪದ್ಧತಿಯು ಅಸಿಂಧು ಮತ್ತು ಅಸಾಂವಿಧಾನಿಕವಾಗಿದೆ ಎಂದು ಮಂಗಳವಾರ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯದ ಪಂಚಸದಸ್ಯರ ಸಂವಿಧಾನ ಪೀಠದ ಐವರು ನ್ಯಾಯಾಧೀಶರು ಹಿಂದು, ಕ್ರೈಸ್ತ, ಮುಸ್ಲಿಂ, ಸಿಖ್ ಮತ್ತು ಪಾರ್ಸಿ...ಹೀಗೆ ವಿವಿಧ ಧರ್ಮಗಳಿಗೆ ಸೇರಿದವರಾಗಿದ್ದಾರೆ.

ಈ ಪೈಕಿ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರೋಹಿಂಗ್ಟನ್ ನಾರಿಮನ್ ಮತ್ತು ಯು.ಯು.ಲಲಿತ್ ಅವರು,‘‘ಧಾರ್ಮಿಕವಾಗಿ ಪಾಪಕರವಾಗಿರುವುದು ಕಾನೂನಿನಡಿ ಸಿಂಧುವಾಗುವುದಿಲ್ಲ’’ ಎಂದು ಹೇಳಿದ್ದಾರೆ.

ತ್ರಿವಳಿ ತಲಾಖ್ ಅನುಮತಿಸಲ್ಪಟ್ಟ್ಟಿರುವ ಪದ್ಧತಿಯಾಗಿರಬಹುದು. ಆದರೆ ಅದು ಪ್ರತಿಗಾಮಿ ಮತ್ತು ಅವೌಲಿಕವಾಗಿದೆ. ಅದು ತಕ್ಷಣದ ಪ್ರತಿಕ್ರಿಯೆಯಾಗಿದೆ ಮತ್ತು ಅದನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಅದರಿಂದಾಗಿ ವೈವಾಹಿಕ ಸಂಬಂಧಗಳು ಮುರಿದಿವೆ. ಅದು ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

1,400 ವರ್ಷಗಳಷ್ಟು ಹಳೆಯದಾದ ತ್ರಿವಳಿ ತಲಾಖ್ ಪದ್ಧತಿಯನ್ನು ಪ್ರಶ್ನಿಸಿ ಐವರು ಮುಸ್ಲಿಂ ಮಹಿಳೆಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತ್ತು. ಈ ಪೈಕಿ ಓರ್ವ ಮಹಿಳೆಗೆ ಆಕೆಯ ಪತಿ ವಾಟ್ಸಾಪ್ ಮೂಲಕ ವಿಚ್ಛೇದನ ನೀಡಿದ್ದ.

ಪವಿತ್ರ ಕುರ್ ಆನ್ ಕೆಟ್ಟದ್ದು ಎಂದು ಹೇಳಿರುವುದು ಶರೀಯತ್‌ನಲ್ಲಿ ಒಳ್ಳೆಯದಾಗಿ ರಲು ಸಾಧ್ಯವಿಲ್ಲ. ಈ ಅರ್ಥದಲ್ಲಿ ಧರ್ಮಶಾಸ್ತ್ರದಲ್ಲಿ ಕೆಟ್ಟದ್ದು ಎನ್ನಲಾಗಿರುವ ವಿಷಯ ಕಾನೂನಿಲ್ಲಿಯೂ ಕೆಟ್ಟದ್ದಾಗಿಯೇ ಇರುತ್ತದೆ ಎಂದು ನ್ಯಾ.ಜೋಸೆಫ್ ಹೇಳಿದರು.

ಆದರೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯ ನ್ಯಾ.ಜೆ.ಎಸ್.ಖೇಹರ್ ಮತ್ತು ನ್ಯಾ.ಅಬ್ದುಲ್ ನಝೀರ್ ಅವರು, ತ್ರಿವಳಿ ತಲಾಖ್ ಪಾಪಕರವಾಗಿರಬಹುದು,ಆದರೆ ಸಂವಿಧಾನದಡಿ ಮೂಲಭೂತ ಹಕ್ಕಿನ ಸ್ಥಾನಮಾನ ಹೊದಿರುವ ವೈಯಕ್ತಿಕ ಕಾನೂನು ಗಳಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದರು. ಈ ಪದ್ಧತಿಯನ್ನು ಅಂತ್ಯಗೊಳಿಸಲು ಕಾನೂನೊಂದನ್ನು ರೂಪಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೆ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾ.ಜೋಸೆಫ್ ಅವರು, ಇಂತಹ ಪದ್ಧತಿಗೆ ಯಾವುದೇ ಸಾಂವಿಧಾನಿಕ ರಕ್ಷಣೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಸ್ಲಿಮರು 1937ರಲ್ಲಿ ಜಾರಿಗೆ ಬಂದಿದ್ದ ವೈಯಕ್ತಿಕ ಕಾನೂನಿನ ಅಧೀನರಾಗಿದ್ದಾರೆ. ತ್ರಿವಳಿ ತಲಾಖ್‌ನಂತಹ ಪದ್ಧತಿಗಳು ಮಹಿಳೆಯರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಸರಕಾರವು ಸುದೀರ್ಘ ಸಮಯದಿಂದ ವಾದಿಸುತ್ತಲೇ ಬಂದಿತ್ತು. ಈ ವಿಷಯದಲ್ಲಿ ನ್ಯಾಯಾಲಯದ ಹಸ್ತಕ್ಷೇಪವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ವಿರೋಧಿಸಿತ್ತು.

ಇಸ್ಲಾಮ್‌ನಲ್ಲಿ ಕುಟುಂಬ ಜೀವನಕ್ಕೆ ಮೂಲಭೂತವಾಗಿರುವ ವೈವಾಹಿಕ ಸಂಬಂಧವನ್ನು ವಿಚ್ಛೇದನವು ತುಂಡರಿಸುತ್ತದೆ. ಅದು ಪುರುಷ ಮತ್ತು ಮಹಿಳೆಯ ನಡುವಿನ ವೈವಾಹಿಕ ಸಂಬಂಧವನ್ನು ಹಾಳುಗೆಡವುದಷ್ಟೇ ಅಲ್ಲ, ಇಂತಹ ದಂಪತಿಗಳ ಮಕ್ಕಳ ಮೇಲೆ ತೀವ್ರ ಮಾನಸಿಕ ಮತ್ತು ಇತರ ಪರಿಣಾಮಗಳನ್ನೂ ಬೀರುತ್ತದೆ ಎಂದು ನ್ಯಾಯಮೂರ್ತಿಗಳಾದ ನಾರಿಮನ್ ಮತ್ತು ಲಲಿತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News