ಪಠಾಣ್ಸ್ ಕ್ರಿಕೆಟ್ ಅಕಾಡಮಿಯಲ್ಲಿ ಕಾಶ್ಮೀರದ ಇಬ್ಬರು ಕ್ರಿಕೆಟಿಗರಿಗೆ ತರಬೇತಿ

Update: 2017-08-22 18:21 GMT

ಹೊಸದಿಲ್ಲಿ, ಆ.22: ಭಾರತದ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ನೊಯ್ಡಿದಲ್ಲಿರುವ ತಮ್ಮ ಕ್ರಿಕೆಟ್ ಅಕಾಡಮಿಯಲ್ಲಿ ಜಮ್ಮು-ಕಾಶ್ಮೀರದ ಇಬ್ಬರು ಯುವ ಆಟಗಾರರಾದ ದಾನಿಶ್ ಖಾದಿರ್(18 ವರ್ಷ) ಹಾಗೂ ಶಾರೂಖ್ ಹುಸೇನ್‌ಗೆ ತರಬೇತಿ ನೀಡಲಿದ್ದಾರೆ.

ಆಲ್‌ರೌಂಡರ್‌ಗಳಾದ ಪಠಾಣ್ ಸಹೋದರರು ಈ ವರ್ಷದ ಮೇನಲ್ಲಿ ನೊಯ್ಡದಲ್ಲಿ ಪಠಾಣ್ಸ್ ಕ್ರಿಕೆಟ್ ಅಕಾಡಮಿಯ ಶಾಖೆಯನ್ನು ಉದ್ಘಾಟಿಸಿದ್ದರು. ಈ ಅಕಾಡಮಿಯಲ್ಲಿ ಕೋಚ್‌ಗಳಿಗೆ ಹೇಗೆ ಕೋಚಿಂಗ್ ನೀಡಬಹುದೆಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಕೋಚ್‌ಗಳು ಯುವ ಕ್ರಿಕೆಟಿಗರಿಗೆ ಸಲಹೆ-ಸೂಚನೆ ನೀಡಲಿದ್ದಾರೆ. ಪಠಾಣ್ಸ್ ಕ್ರಿಕೆಟ್ ಅಕಾಡಮಿ ಭಾರತೀಯ ಸೇನೆಯ ಜೊತೆಗೂಡಿ ಕೆಲಸ ಮಾಡುತ್ತಿದೆ. ಕುಪ್ವಾರ ಜಿಲ್ಲೆಯಲ್ಲಿ ಆಯ್ಕೆಗಾಗಿ ಟ್ರಯಲ್ಸ್ ನಡೆಸಿದ ಬಳಿಕ ಭಾರತೀಯ ಸೇನೆಯು ಖಾದಿರ್ ಹಾಗೂ ಹುಸೇನ್‌ರನ್ನು ಪಠಾಣ್ಸ್ ಅಕಾಡಮಿಗೆ ಆಯ್ಕೆ ಮಾಡಿತ್ತು. ‘‘ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆಸಲಾಗಿದ್ದ ಟ್ರಯಲ್ಸ್ ನಲ್ಲಿ 100 ಕ್ರಿಕೆಟ್ ಆಕಾಂಕ್ಷಿಗಳ ಪೈಕಿ ಇಬ್ಬರು ಯುವ ಕ್ರಿಕೆಟಿಗರನ್ನು ಭಾರತೀಯ ಸೇನೆ ಆಯ್ಕೆ ಮಾಡಿದೆ. ಇಬ್ಬರು ಕ್ರಿಕೆಟಿಗರು ನಮ್ಮ ಅಕಾಡಮಿಯಲ್ಲಿ ತರಬೇತಿ ಪಡೆಯಲಿದ್ದಾರೆ. ನಾವು ಸದಾಕಾಲ ಕ್ರಿಕೆಟ್ ಉತ್ತೇಜನಕ್ಕೆ ಬೆಂಬಲ ನೀಡುತ್ತೇವೆ. ಈ ಯುವಕರಿಗೆ ಪ್ರೋತ್ಸಾಹಿಸುತ್ತಿರುವ ಭಾರತೀಯ ಸೇನೆಯ ಹೆಜ್ಜೆ ಶ್ಲಾಘನೀಯ’’ ಎಂದು ಇರ್ಫಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News