ಗೋಶಾಲೆಗಳಲ್ಲಿ ಸತ್ತ ಗೋವುಗಳನ್ನು ಕಸಾಯಿಖಾನೆಗೆ ಮಾರುತ್ತಿದ್ದ ಹರೀಶ್ ವರ್ಮಾ
Update: 2017-08-26 18:59 IST
ಹೊಸದಿಲ್ಲಿ, ಆ.26: ಗೋಶಾಲೆಯಲ್ಲಿ 300ಕ್ಕೂ ಅಧಿಕ ಗೋವುಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಛತ್ತೀಸ್ ಗಢದ ಬಿಜೆಪಿ ಮುಖಂಡ ಹರೀಶ್ ವರ್ಮಾ ಸತ್ತ ಗೋವುಗಳನ್ನು ಕಸಾಯಿಖಾನೆಗೆ ಮಾರುತ್ತಿದ್ದ ಹಾಗೂ ಅದರ ಚರ್ಮ ಮತ್ತು ಮೂಳೆಗಳ ವ್ಯಾಪಾರದಿಂದ ಹಣ ಗಳಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯದ ಗೋ ಸೇವಾ ಆಯೋಗವು ಪೊಲೀಸರಿಗೆ ನೀಡಿದ ದೂರಿನಲ್ಲಿ ಈ ಆರೋಪ ಮಾಡಿದೆ.
“ಗೋ ಸೇವಾ ಆಯೋಗದ ಆರೋಪಗಳು ಸತ್ಯವೆಂದು ತಿಳಿದುಬಂದಿದೆ” ಎಂದು ಪೊಲೀಸ್ ಅಧಿಕಾರಿ ದೀಪಾಂಶು ಕಬ್ರಾ ಹೇಳಿದ್ದಾರೆ. “ಕೆಲವು ಆರೋಪಿಗಳು ಸತ್ತ ದನಗಳನ್ನು ಕಸಾಯಿಖಾನೆಗೆ ಮಾರಲಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ. ಶೀಘ್ರವೇ ಸಂಪೂರ್ಣ ಮಾಹಿತಿ ಸಿಗಲಿದೆ” ಎಂದವರು ಹೇಳಿದ್ದಾರೆ.
ಮೇವು ಹಾಗೂ ಔಷಧವಿಲ್ಲದೆ ಹರೀಶ್ ವರ್ಮಾನ ಗೋಶಾಲೆಗಳಲ್ಲಿದ್ದ 300 ಗೋವುಗಳು ಸಾವನ್ನಪ್ಪಿದ್ದವು. ಆಗಸ್ಟ್ 18ರಂದು ಆತನ ಬಂಧನವಾದ ನಂತರ ಬಿಜೆಪಿ ಆತನನ್ನು ಪಕ್ಷದಿಂದ ಹೊರಹಾಕಿತ್ತು.