ವಿರಾಟ್ ಕೊಹ್ಲಿಗೆ ಕೋಚಿಂಗ್ ನೀಡಿದ್ದನಂತೆ ಗುರ್ಮೀತ್!

Update: 2017-08-26 13:38 GMT

ಹೊಸದಿಲ್ಲಿ, ಆ.26: ಅತ್ಯಾಚಾರ ಆರೋಪದಲ್ಲಿ ದೋಷಿಯಾಗಿರುವ ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ಸಿಂಗ್ ಭಾರತದ ನಾಯಕ ವಿರಾಟ್ ಕೊಹ್ಲಿ ಸಹಿತ ಹಲವು ಕ್ರಿಕೆಟಿಗರಿಗೆ ಕೋಚಿಂಗ್ ನೀಡಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿರುವ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜೋಕ್ ಆಗಿ ಹರಿದಾಡುತ್ತಿದೆ.

‘‘ವಿರಾಟ್ ಕೊಹ್ಲಿ ಹಾಗೂ ವೀರೇಂದ್ರ ಸೆಹ್ವಾಗ್ ದೇಶಕ್ಕೆ ಇಷ್ಟೊಂದು ಗೌರವ ತರುವುದಕ್ಕೆ ನಾನೇ ಕಾರಣ. ವಿರಾಟ್ ಕೊಹ್ಲಿ, ಯೂಸುಫ್ ಪಠಾಣ್ ಹಾಗೂ ಪಾಕಿಸ್ತಾನದ ಕ್ರಿಕೆಟ್ ಲೆಜಂಡ್ ವಕಾರ್ ಯೂನಿಸ್‌ಗೂ ನಾನು ಕೋಚಿಂಗ್ ನೀಡಿದ್ದೇನೆ’’ ಎಂದು ಸಂದರ್ಶನವೊಂದರಲ್ಲಿ ಗುರ್ಮೀತ್ ಹೇಳಿಕೊಂಡಿದ್ದ.

ತನ್ನನ್ನು ತಾನೇ ಸೈಂಟ್ ಡಾ. ಗುರುಮೀತ್ ಇನ್ಸಾನ್ ಎಂದು ಕರೆಸಿಕೊಳ್ಳುತ್ತಿರುವ ಗುರ್ಮೀತ್, 2016ರ ಸೆಪ್ಟಂಬರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ರೆಡ್ ಜಾಕೆಟ್, ಹ್ಯಾಟ್ಸ್, ಟೀ-ಶರ್ಟ್‌ಗಳನ್ನು ಧರಿಸಿಕೊಂಡು ‘‘ನಾನು ಜೀವನದಲ್ಲಿ ಹಲವು ಸಾಧನೆ ಮಾಡಿದ್ದನ್ನು ನೀವು ಗಮನಿಸಿದ್ದೀರಿ. ರಾಷ್ಟ್ರಮಟ್ಟದಲ್ಲಿ 32 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ. ಕೋಚಿಂಗ್ ಕೂಡ ನೀಡಿದ್ದೇನೆ’’ಎಂದು ಹೇಳಿಕೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News