×
Ad

ಭಾರತದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಪ್ರಮಾಣ ಹೆಚ್ಚಳ

Update: 2017-08-28 20:37 IST

ಹೊಸದಿಲ್ಲಿ, ಆ.28: ಭಾರತೀಯರು ಹೃದಯಾಘಾತಕ್ಕೆ ಒಳಗಾಗುವ ಪ್ರಮಾಣ ಇತ್ತೀಚೆಗೆ ಅಧಿಕಗೊಳ್ಳುತ್ತಿದೆ. ಅಲ್ಲದೆ ದಕ್ಷಿಣ ಏಶ್ಯ, ಪಶ್ಚಿಮ ಏಶ್ಯ ಹಾಗೂ ದಕ್ಷಿಣ ಅಮೆರಿಕಕ್ಕೆ ಹೋಲಿಸಿದರೆ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಮಾಣ ಭಾರತದಲ್ಲಿ ಅತ್ಯಧಿಕವಾಗಿದೆ ಎಂದು ಜಾಗತಿಕ ಮಟ್ಟದಲ್ಲಿ ನಡೆಸಲಾದ ಅಧ್ಯಯನದಿಂದ ತಿಳಿದುಬಂದಿದೆ.

ಹೃದಯದ ಸ್ನಾಯುಗಳು ದುರ್ಬಲಗೊಂಡು ‘ಪಂಪ್’ ಮಾಡುವ ಪ್ರಕ್ರಿಯೆಯನ್ನು ಸೂಕ್ತ ಪ್ರಮಾಣದಲ್ಲಿ ನಿರ್ವಹಿಸಲು ವಿಫಲವಾದಾಗ ದೇಹಕ್ಕೆ ಅಗತ್ಯವಿರುವ ಪ್ರಮಾಣದ ರಕ್ತದ ಹರಿವಿಗೆ ತಡೆಯಾಗುತ್ತದೆ. ಇದನ್ನು ರಕ್ತಕಟ್ಟುವಿಕೆಯಿಂದ ಸಂಭವಿಸುವ ಹೃದಯ ವೈಫಲ್ಯ ಎಂದು ಕರೆಯಲಾಗುತ್ತಿದೆ.

 ರಕ್ತ ಕಟ್ಟುವಿಕೆಯಿಂದ ಉಂಟಾಗುವ ಹೃದಯ ವೈಫಲ್ಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ನಡೆಸಲಾದ ಅಧ್ಯಯನವನ್ನು ‘ಲ್ಯಾನ್ಸೆಟ್’ನ ಇತ್ತೀಚಿನ ಆವೃತ್ತಿಯಲ್ಲಿ ಪ್ರಕಟಿಸಲಾಗಿದ್ದು , ಭಾರತದಲ್ಲಿ ಹೃದಯ ವೈಫಲ್ಯದ ಕಾರಣದಿಂದ ಸಂಭವಿಸುವ ಶೇ.23ರಷ್ಟು ಮರಣ, ಚಿಕಿತ್ಸೆಗೆ ದಾಖಲಾದ ಒಂದು ವರ್ಷದಲ್ಲೇ ಸಂಭವಿಸುತ್ತದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಮಾಣ ಶೇ.34ರಷ್ಟಿರುವ ಆಫ್ರಿಕಾದ ನಂತರದ ಸ್ಥಾನದಲ್ಲಿ ಭಾರತವಿದೆ. ಹೃದಯ ವೈಫಲ್ಯದಿಂದ ಮರಣ ಸಂಭವಿಸುವ ಪ್ರಮಾಣ ಆಗ್ನೇಯ ಏಶ್ಯಾದಲ್ಲಿ ಶೇ.15ರಷ್ಟಿದ್ದರೆ, ಚೀನಾದಲ್ಲಿ ಶೇ.7ರಷ್ಟಿದೆ. ದಕ್ಷಿಣ ಅಮೆರಿಕ ಹಾಗೂ ಪಶ್ಚಿಮ ಏಶ್ಯಾದಲ್ಲಿ ಈ ಪ್ರಮಾಣ ಶೇ.9ರಷ್ಟಿದ್ದು ಭಾರತಕ್ಕೆ ಹೋಲಿಸಿದರೆ ಇದು ಬಹಳಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

ಹೃದಯ ಸಂಬಂಧಿ ಕಾಯಿಲೆಗೆ ಒಳಗಾದ ಒಂದು ವರ್ಷದಲ್ಲಿ ಸಂಭವಿಸುವ ಸಾವಿನ ಪ್ರಮಾಣವನ್ನು ಅಂದಾಜಿಸಲು ಭಾರತ, ಆಫ್ರಿಕ, ಚೀನಾ, ಮಧ್ಯಪ್ರಾಚ್ಯ ರಾಷ್ಟ್ರಗಳು, ಆಗ್ನೇಯ ಏಶ್ಯ ಮತ್ತು ದಕ್ಷಿಣ ಅಮೆರಿಕ ದೇಶಗಳಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಾಗಿದೆ. ಈ ಆರು ಭೂಪ್ರದೇಶದ 108 ಕೇಂದ್ರಗಳಲ್ಲಿ 5,823 ರೋಗಿಗಳನ್ನು ಈ ಸಮೀಕ್ಷೆಗೆ ನೋಂದಾಯಿಸಲಾಗಿತ್ತು.

ಹೀಗೆ ನೋಂದಾಯಿಸಲ್ಪಟ್ಟ ರೋಗಿಗಳನ್ನು ಆರು ತಿಂಗಳಾವಧಿಯಲ್ಲಿ ಒಮ್ಮೆ ಹಾಗೂ ವರ್ಷಾಂತ್ಯಕ್ಕೆ - ಹೀಗೆ ಎರಡು ಬಾರಿ ಗಮನಿಸಲಾಗಿದೆ. ಇಲ್ಲಿ ನೋಂದಾಯಿಸಲಾದ ರೋಗಿಗಳ ಸರಾಸರಿ ವರ್ಷ 59 ಆಗಿದ್ದು ಪುರುಷರು ಮತ್ತು ಮಹಿಳೆಯರು 60:40ರ ಪ್ರಮಾಣದಲ್ಲಿದ್ದಾರೆ. ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.46ರಷ್ಟು ಹೃದಯ ಸಂಬಂಧಿ ಕಾಯಿಲೆಯಿಂದ ಸಂಭವಿಸುತ್ತದೆ. ಭಾರತೀಯರಲ್ಲಿ ಹೃದಯ ವೈಫಲ್ಯದ ಪ್ರಮಾಣ ಅತ್ಯಂತ ತೀವ್ರವಾಗಿ ಹೆಚ್ಚಾಗುತ್ತಿದ್ದು ಈ ಸಮಸ್ಯೆಗೆ ಹಲವಾರು ಕಾರಣಗಳಿವೆ. ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿ ತಿನ್ನದಿರುವುದು, ದೈಹಿಕ ಶ್ರಮದ ಕಾರ್ಯ ನಡೆಸದೆ ಮಧುಮೇಹ ಕಾಯಿಲೆಗೆ ತುತ್ತಾಗುವುದು, ಬೊಜ್ಜು ಹಾಗೂ ರಕ್ತದೊತ್ತಡದ ಸಮಸ್ಯೆ, ಧೂಮಪಾನ ಹಾಗೂ ಮಾನಸಿಕ ಒತ್ತಡ ಇತ್ಯಾದಿ ಸಮಸ್ಯೆಗಳು ಹೃದಯ ವೈಫಲ್ಯಕ್ಕೆ ಕಾರಣವಾಗಿವೆ ಎಂದು ದಿಲ್ಲಿಯ ಅಖಿಲಭಾರತ ವೈದ್ಯವಿಜ್ಞಾನ ಸಂಸ್ಥೆಯ ಹೃದಯಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ ಸಂದೀಪ್ ಮಿಶ್ರ ಹೇಳಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಜೆಗಳಿಗೆ ಹೋಲಿಸಿದರೆ ಭಾರತೀಯರು ಕನಿಷ್ಟ 10 ವರ್ಷ ಮೊದಲೇ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗುತ್ತಾರೆ. ತಿಳುವಳಿಕೆಯ ಕೊರತೆ, ಮಿತಿಮೀರಿದ ಆಸ್ಪತ್ರೆಯ ಖರ್ಚು ಹಾಗೂ ಮೂಲಭೂತ ಸೌಕರ್ಯದ ಕೊರತೆ ಹೃದಯ ಸಂಬಂಧಿ ರೋಗದ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಸಂದೀಪ್ ಮಿಶ್ರ ಅಭಿಪ್ರಾಯಪಟ್ಟಿದ್ದಾರೆ. ಬದಲಾಗುತ್ತಿರುವ ಜೀವನಶೈಲಿ ಕೂಡಾ ಹೃದ್ರೋಗ ಸಾಂಕ್ರಾಮಿಕ ರೋಗದಂತೆ ಹೆಚ್ಚಲು ಕಾರಣವಾಗಿದೆ ಎಂದವರು ಹೇಳಿದ್ದಾರೆ.

ಹೃದಯ ವೈಫಲ್ಯ ಎಂಬುದು ದೀರ್ಫಕಾಲೀನ ಸಮಸ್ಯೆಯಾಗಿದ್ದು ಇದನ್ನು ನಿಯಮಿತ ಆಹಾರಕ್ರಮ, ವ್ಯಾಯಾಮ ಹಾಗೂ ಔಷಧ ಸೇವನೆಯಿಂದ ಗುಣಪಡಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯ ಆಧಾರಿತ ಪ್ರಯತ್ನದ ಅಗತ್ಯವಿದೆ ಎಂದು ಮಿಶ್ರ ಹೇಳಿದ್ದಾರೆ. ಹಲವಾರು ಭಾರತೀಯರು ಹೃದಯ ವೈಫಲ್ಯ ಮತ್ತು ಹೃದಯಾಘಾತದ ನಡುವಿನ ವ್ಯತ್ಯಾಸ ತಿಳಿಯದ ಕಾರಣ ಅವರು ವೈದ್ಯರೊಡನೆ ಸಮಾಲೋಚಿಸುವುದಿಲ್ಲ. ಹೃದಯದ ‘ಪಂಪಿಂಗ್’ ಸಾಮರ್ಥ್ಯ ಕುಗ್ಗುವುದು ಹೃದಯ ವೈಫಲ್ಯ ಸಮಸ್ಯೆಗೆ ಕಾರಣ. ಹೃದಯಕ್ಕೆ ಅಥವಾ ಸ್ನಾಯುಗಳಿಗೆ ರಕ್ತಸಂಚಾರ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾದಾಗ ಹೃದಯಾಘಾತ ಸಂಭವಿಸುತ್ತದೆ. ಹೃದಯಾಘಾತವು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು ಇದನ್ನು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯವಿದೆ ಎಂದು ಮಿಶ್ರ ತಿಳಿಸಿದ್ದಾರೆ. ದೇಶದಲ್ಲಿ ಪ್ರತೀವರ್ಷ 1.3 ರಿಂದ 4.6 ಮಿಲಿಯನ್ ಜನ ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾಗುತ್ತಿದ್ದು ಜನತೆಯಲ್ಲಿ ಹೃದಯ ವೈಫಲ್ಯ ಸಮಸ್ಯೆ ದೂರಗೊಳಿಸುವ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News