ನೋಟು ಅಮಾನ್ಯ:ನಿಷೇಧಿತ 500,1000 ರೂ. ನೋಟುಗಳ ಪೈಕಿ ಹೆಚ್ಚಿನವು ವಾಪಸ್; ಆರ್‌ಬಿಐ
ಮುಂಬೈ,ಆ.30: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ನ.8ರಂದು ದಿಢೀರ್ ಘೋಷಿಸಿದ್ದ 500 ಮತ್ತು 1000 ರೂ.ನೋಟುಗಳ ಅಮಾನ್ಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಆರ್‌ಬಿಐ ಬುಧವಾರ ಬಿಡುಗಡೆಗೊಳಿಸಿದ ತನ್ನ ವಾರ್ಷಿಕ ವರದಿಯಲ್ಲಿ ಬಹಿರಂಗಗೊಳಿಸಿದೆ. ನಿಷೇಧಕ್ಕೆ ಮುನ್ನ ಚಲಾವಣೆಯಲ್ಲಿದ್ದ 15.44 ಲಕ್ಷ ಕೋಟಿ ರೂ. ಮೌಲ್ಯದ 500 ಮತ್ತು 1000 ರೂ.ನೋಟುಗಳ ಪೈಕಿ 15.28 ಲಕ್ಷ ಕೋಟಿ ರೂ.ಮೌಲ್ಯದ ನೋಟುಗಳನ್ನು ಜನರು ಬ್ಯಾಂಕ್‌ಗಳಿಗೆ ಮರಳಿಸಿದ್ದಾರೆ. ಕೇವಲ 16,000 ಕೋ.ರೂ.ಮೌಲ್ಯದ ನೋಟುಗಳು ವಾಪಸಾಗಿಲ್ಲ!
ನ.8ಕ್ಕೆ ಮುನ್ನ ದೇಶಾದ್ಯಂತ 1000 ರೂ.ಮುಖಬೆಲೆಯ 632.6 ಕೋ.ನೋಟುಗಳು ಚಲಾವಣೆಯಲ್ಲಿದ್ದವು, ಈ ಪೈಕಿ 8.9 ಕೋ.ನೋಟುಗಳು ಮಾತ್ರ ಬ್ಯಾಂಕ್‌ಗಳಿಗೆ ವಾಪಸಾಗಿಲ್ಲ ಎಂದು ಆರ್‌ಬಿಐ 2017-17ನೇ ಸಾಲಿನ ತನ್ನ ವರದಿಯಲ್ಲಿ ತಿಳಿಸಿದೆ.
ಸರಕಾರವು ಕಪ್ಪುಹಣವನ್ನು ನಿರ್ಮೂಲಿಸುವ ಉದ್ದೇಶದಿಂದ ನ.8 ಮಧ್ಯರಾತ್ರಿಯಿಂದ 500 ಮತ್ತು 1000 ರೂ.ಗಳ ನೋಟುಗಳನ್ನು ರದ್ದುಗೊಳಿಸಿತ್ತು. ರದ್ದಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಅವಕಾಶ ನೀಡಲಾಗಿತ್ತು.
ರದ್ದಾದ 500 ರೂ.ನೋಟುಗಳ ಬದಲಿಗೆ ಸರಕಾರವು ಹೊಸ 500 ರೂ. ನೋಟುಗಳನ್ನು ಚಲಾವಣೆಗೆ ತಂದಿದೆ. 1000 ರೂ.ಗಳ ಬದಲಿಗೆ 2000 ರೂ.ಗಳ ನೋಟುಗಳು ಈಗ ಜನರ ಕೈಗಳಲ್ಲಿ ಹರಿದಾಡುತ್ತಿವೆ.
ಹೊಸ ಕರೆನ್ಸಿ ನೋಟುಗಳ ಮುದ್ರಣದಿಂದಾಗಿ ಹಿಂದಿನ ವರ್ಷ 3,421 ಕೋ.ರೂ. ಗಳಿದ್ದ ನೋಟು ಮುದ್ರಣ ವೆಚ್ಚವು ವರದಿ ವರ್ಷದಲ್ಲಿ ಇಮ್ಮಡಿಗೊಂಡು 7,965 ಕೋ.ರೂ.ಗಳಾಗಿದೆ ಎಂದು ವರದಿಯು ತಿಳಿಸಿದೆ. ಹೊಸ 500 ಮತ್ತು 2000 ರೂ.ನೋಟುಗಳ ಜೊತೆಗೆ 200 ರೂ.ಮುಖಬೆಲೆಯ ಹೊಸನೋಟುಗಳನ್ನೂ ಆರ್‌ಬಿಐ ಮುದ್ರಿಸಿದೆ.
ದೊಡ್ಡ ಮೊತ್ತದ ಕೋಟಾ ನೋಟುಗಳು ಚಲಾವಣೆಯಲ್ಲಿವೆ. ಇವು ನೋಟು ರದ್ಧತಿಯಿಂದಾಗ ಬೆಳಕಿಗೆ ಬರುತ್ತವೆ ಎಂದು ಹೇಳಲಾಗಿತ್ತು. ಆದರೆ ಚಲಾವಣೆಯಲ್ಲಿದ್ದ 99% ನೋಟುಗಳು ಮತ್ತೆ ಬ್ಯಾಂಕ್ ಸೇರಿವೆ. ಹಾಗಾದರೆ ಆ ಕೋಟಾ ನೋಟುಗಳು ಎಲ್ಲಿ ಹೋದವು ?
ಆಗಸ್ಟ್ 30 ರಂದು ಬಿಡುಗಡೆಯಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿಯ ಪ್ರಕಾರ :
ನೋಟು ರದ್ದತಿಯಲ್ಲಿ ಅಮಾನ್ಯವಾದ 500, 1000 ರೂ. ನೋಟುಗಳ ಒಟ್ಟು ಮೌಲ್ಯ - ರೂ.15.44 ಲಕ್ಷ ಕೋಟಿ
ಬ್ಯಾಂಕಿಗೆ ಮರಳಿದ ಅಮಾನ್ಯಗೊಂಡ ನೋಟುಗಳ ಮೌಲ್ಯ - ರೂ. 15.28 ಲಕ್ಷ ಕೋಟಿ
ಹಾಗಾದರೆ ಬ್ಯಾಂಕಿಗೆ ಬಾರದ ಕಪ್ಪು ಹಣ - ಕೇವಲ ರೂ. 16 ಸಾವಿರ ಕೋಟಿ
ಹೊಸ ನೋಟುಗಳ ಮುದ್ರಣಕ್ಕೆ ಖರ್ಚಾದ ಹಣ - ರೂ. 8 ಸಾವಿರ ಕೋಟಿ