ಕೇಸರಿ ಭಯೋತ್ಪಾದನೆ ಪದ ಬಳಕೆಗೆ ಗೃಹ ಕಾರ್ಯದರ್ಶಿ ಮೆಹ್ರಿಷಿ ಆಕ್ಷೇಪ
ಹೊಸದಿಲ್ಲಿ, ಆ. 30: ಕೇಸರಿ ಭಯೋತ್ಪಾದನೆ ಪದ ಬಳಕೆಯನ್ನು ನಾನು ಆಕ್ಷೇಪಿಸುತ್ತೇನೆ. ಭಯೋತ್ಪಾದನೆಗೆ ಬಣ್ಣವಿಲ್ಲ ಎಂದು ಕೇಂದ್ರದ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ ಹೇಳಿದ್ದಾರೆ.
ತನ್ನ ಅಧಿಕಾರಾವಧಿಯ ಕೊನೆಯ ದಿನವಾದ ಇಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಷಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಸಂದರ್ಭ ಲವ್ ಜಿಹಾದ್, ಅತ್ಯಾಚಾರ ಪ್ರಕರಣದಲ್ಲಿ ಬಾಬಾ ಗುರ್ಮೀತ್ ಸಿಂಗ್ ಶಿಕ್ಷೆಗೆ ಗುರಿಯಾದ ಬಳಿಕ ಹರ್ಯಾಣದಲ್ಲಿ ನಡೆದ ಹಿಂಸಾಚಾರ, ಭಯೋತ್ಪಾದನೆಗೆ ಹಣ ಹೂಡಿಕೆ ಮಾಡಿರುವವರ ವಿರುದ್ಧ ಎನ್‌ಐಎ ಶಿಸ್ತು ಕ್ರಮ ಕೈಗೊಂಡಿರುವುದು ಮೊದಲಾದ ವಿಷಯಗಳ ಬಗ್ಗೆ ಅವರು ಚರ್ಚೆ ನಡೆಸಿದರು.
38 ಜನರ ಸಾವಿಗೆ ಕಾರಣವಾದ ಹರ್ಯಾಣ ಹಿಂಸಾಚಾರವನ್ನು ಖಂಡಿಸಿದ ಮೆಹ್ರಿಷಿ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಉಲ್ಲಂಘಿಸುವುದು ಚಲನಶೀಲ ಹಾಗೂ ಅನಿರೀಕ್ಷಿತ ಎಂದರು.
ದಿಲ್ಲಿಯಲ್ಲಿ ಕುಳಿತುಕೊಂಡು ನಾವೇನೂ ಹೇಳಲು ಸಾಧ್ಯವಿಲ್ಲ. ಯಾವುದೇ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕಾಗಿರುವುದು ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರದ ಕರ್ತವ್ಯ ಎಂದು ಅವರು ಹೇಳಿದರು.
ಹಿಂದೂ ಸಂಘಟನೆಗಳು ಕೇಸರಿ ಭಯೋತ್ಪಾದನೆ ಹರಡುತ್ತಿವೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಸರಿ ಭಯೋತ್ಪಾದನೆ ಎಂಬ ಪದ ಬಳಕೆಯನ್ನು ನಾನು ಒಪ್ಪ್ಪುವುದಿಲ್ಲ. ಭಯೋತ್ಪಾದನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು ಎಂದರು.
ಮಾಲೇಗಾಂವ್ ಹಾಗೂ ಸಂಜೋತಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ಸಾಧ್ವಿ ಪ್ರಜ್ಞಾ ಹಾಗೂ ಲೆ. ಕ. ಪುರೋಹಿತ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಹೇಳಿಕೆ ಪ್ರಾಮಖ್ಯತೆ ಪಡೆದುಕೊಂಡಿದೆ. ಮಾಲೇಗಾಂವ್ ಹಾಗೂ ಸಂಜೋತಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೇಸರಿ ಭಯೋತ್ಪಾದನೆ ಪದ ಬಳಸಲಾಗಿತ್ತು.