ಕೇರಳ: ಖಾದಿ ‘ಪರ್ದಾ’ಗೆ ಹೆಚ್ಚಿದ ಬೇಡಿಕೆ
ತಿರುವನಂತಪುರಂ, ಸೆ.10: ವಿಶ್ವದಾದ್ಯಂತ ಮುಸ್ಲಿಮ್ ಮಹಿಳೆಯರು ಧರಿಸುವ ‘ಪರ್ದಾ’ಗೆ ಈಗ ಕೇರಳದಲ್ಲಿ ಖಾದಿ ಸ್ವರೂಪದ ಮೂಲಕ ದೇಶೀಯ ಸ್ಪರ್ಶ ನೀಡಲಾಗುತ್ತಿದ್ದು, ದೇಶದಲ್ಲಷ್ಟೇ ಅಲ್ಲ, ವಿದೇಶದಿಂದಲೂ ಭಾರೀ ಬೇಡಿಕೆ ವ್ಯಕ್ತವಾಗಿದೆ.
ಪರ್ದಾ’ಕ್ಕೆ ವಿಶ್ವದಾದ್ಯಂತ ಇರುವ ಬೇಡಿಕೆಯನ್ನು ಗಮನಿಸಿರುವ ಕೇರಳದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಖಾದಿ ಬಟ್ಟೆಯಿಂದ ‘ಪರ್ದಾ’ ತಯಾರಿಸಲು ನಿರ್ಧರಿಸಿ, ಪರಿಸರ ಸ್ನೇಹಿ ಖಾದಿ ‘ಪರ್ದಾ’ವನ್ನು ಇತ್ತೀಚೆಗೆ ಮುಕ್ತಾಯವಾದ ಓಣಂ ಹಬ್ಬದ ಸಂದರ್ಭ ಮಾರುಕಟ್ಟೆಗೆ ಪರಿಚಯಿಸಿತ್ತು.
ಕೇರಳದಲ್ಲಿ ದೊರಕುವ ಪರಿಸರಸ್ನೇಹಿ ಖಾದಿ ‘ಪರ್ದಾ’ಗಳು ಕನಿಷ್ಟ ವಿನ್ಯಾಸ, ವೈವಿಧ್ಯಮಯ ವರ್ಣಗಳು ಹಾಗೂ ಸರ್ವ ಖುತುಗಳಿಗೂ ಹೊಂದುವ ವೈಶಿಷ್ಟವನ್ನು ಹೊಂದಿದೆ. ಕಳೆದ ತಿಂಗಳು ಕಣ್ಣೂರ್‌ನಲ್ಲಿ ಪ್ರಪ್ರಥಮ ಬಾರಿಗೆ ನಡೆದ 10 ದಿನಗಳಾವಧಿಯ ಖಾದಿ ‘ಪರ್ದಾ’ ಮಾರಾಟ ಮೇಳದಲ್ಲಿ ಸುಮಾರು 6 ಲಕ್ಷ ರೂ.ವೌಲ್ಯದ ಪರ್ದಾಗಳ ಮಾರಾಟವಾಗಿದ್ದು, ಇದೀಗ ರಾಜ್ಯದ ವಿವಿಧೆಡೆಗಳಿಂದ ಹಾಗೂ ವಿದೇಶಗಳಿಂದಲೂ ಭಾರೀ ಬೇಡಿಕೆ ವ್ಯಕ್ತವಾಗಿದೆ ಎಂದು ಖಾದಿ ಮಂಡಳಿಯ ಉಪಾಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ತಿಳಿಸಿದ್ದಾರೆ.
ಈ ರೀತಿಯ ಬೇಡಿಕೆ ಬರಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ. ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪೂರೈಸಲು ಕಷ್ಟವಾಗುತ್ತಿದೆ. ‘ಪರ್ದಾ’ಗಳನ್ನು ಹೊಲಿಯಲು ನಿಪುಣ ದರ್ಜಿಗಳ ಅಗತ್ಯವಿದೆ. ಇದೀಗ ಖಾದಿ ‘ಪರ್ದಾ’ಗಳ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ತಮ್ಮ ದಿರಿಸಿನ ಮೇಲೆ ‘ಪರ್ದಾ’ವನ್ನು ಧರಿಸುತ್ತಾರೆ. ಖಾದಿ‘ಪರ್ದಾ’ ಬಿಸಿಯನ್ನು ತಡೆಗಟ್ಟುವುದರಿಂದ ಇದನ್ನು ಧರಿಸಿದರೆ ಆರಾಮದಾಯಕ ಅನುಭವವಾಗುತ್ತದೆ ಎಂದು ಕಣ್ಣೂರ್‌ನಲ್ಲಿರುವ ಖಾದಿ ಮಂಡಳಿಯ ಶೋರೂಂನ ಮ್ಯಾನೇಜರ್ ಫಾರೂಕ್ ಕೆ.ವಿ. ತಿಳಿಸಿದ್ದಾರೆ.