ಸ್ಟೀಫನ್ಸ್ ಮುಡಿಗೆ ಸಿಂಗಲ್ಸ್ ಕಿರೀಟ

Update: 2017-09-10 18:36 GMT

►ಪ್ರಶಸ್ತಿ ಜಯಿಸಿದ 5ನೆ ಶ್ರೇಯಾಂಕ ರಹಿತ ಆಟಗಾರ್ತಿ ಸ್ಟೀಫನ್ಸ್

►ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿರುವ ಸ್ಟೀಫನ್ಸ್

►ಸೋಮವಾರ ಬಿಡುಗಡೆಯಾಗಲಿರುವ ವಿಶ್ವ  ರ್ಯಾಂಕಿಂಗ್‌ನಲ್ಲಿ 17ನೆ ಸ್ಥಾನಕ್ಕೆ ಭಡ್ತಿ ಸಾಧ್ಯತೆ

ನ್ಯೂಯಾರ್ಕ್, ಸೆ.10: ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ತನ್ನದೇ ದೇಶದ ಮ್ಯಾಡಿಸನ್ ಕೀಸ್‌ರನ್ನು ನೇರ ಸೆಟ್‌ಗಳಿಂದ ಮಣಿಸಿರುವ ಅಮೆರಿಕದ ಆಟಗಾರ್ತಿ ಸ್ಲೋಯೆನ್ ಸ್ಟೀಫನ್ಸ್ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸ್ಟೀಫನ್ಸ್ ತನ್ನ ಸ್ನೇಹಿತೆ ಮ್ಯಾಡಿಸನ್‌ರನ್ನು 6-3, 6-0 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ ಮಹತ್ವದ ಗೆಲುವು ಸಾಧಿಸುವುದರೊಂದಿಗೆ 3.7 ಮಿಲಿಯನ್ ಡಾಲರ್ ಬಹುಮಾನವನ್ನು ತನ್ನದಾಗಿಸಿಕೊಂಡರು.

2002ರ ಬಳಿಕ ಯುಎಸ್ ಓಪನ್‌ನಲ್ಲಿ ಅಮೆರಿಕದ ಇಬ್ಬರು ಆಟಗಾರ್ತಿಯರು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಿದರು. ಬಲಗಾಲಿನ ನೋವಿನಿಂದಾಗಿ 11 ತಿಂಗಳ ಕಾಲ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದು ಜುಲೈನಲ್ಲಿ ಟೆನಿಸ್‌ಗೆ ವಾಪಸಾಗಿದ್ದ ಸ್ಟೀಫನ್ಸ್‌ಗೆ ಈ ಗೆಲುವು ಭಾರೀ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ.

ಕಳೆದ 17 ಪಂದ್ಯಗಳಲ್ಲಿ 15ರಲ್ಲಿ ಜಯ ಸಾಧಿಸಿರುವ ಸ್ಟೀಫನ್ಸ್ ಮಹಿಳಾ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಐದನೆ ಶ್ರೇಯಾಂಕರಹಿತ ಆಟಗಾರ್ತಿ ಎನಿಸಿಕೊಂಡರು. ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಲಾಟ್ವಿಯದ ಜೆಲೆನಾ ಒಸ್ಟಾಪೆಂಕೊ ಈ ಸಾಧನೆ ಮಾಡಿದ್ದರು. 2009ರಲ್ಲಿ ಕಿಮ್ ಕ್ಲಿಜ್‌ಸ್ಟರ್ಸ್‌ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ ಶ್ರೇಯಾಂಕರಹಿತ ಅಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

‘‘ಈ ಪ್ರಶಸ್ತಿ ನನ್ನ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ನನಗೆ ಜ.23 ರಂದು ಶಸ್ತ್ರಚಿಕಿತ್ಸೆ ಆಗಿತ್ತು. ಯುಎಸ್ ಓಪನ್ ಪ್ರಶಸ್ತಿ ಗೆಲ್ಲುತ್ತೇನೆಂದು ಕನಸಲ್ಲೂ ಯೋಚಿಸಿರಲಿಲ್ಲ. ಗಾಯದಿಂದ ಚೇತರಿಸಿಕೊಂಡ ನಂತರ ನನ್ನ ಪಯಣ ಅಪೂರ್ವವಾಗಿತ್ತು’’ ಎಂದು ಸ್ಟೀಫನ್ಸ್ ಹೇಳಿದ್ದಾರೆ.

‘‘ಇಂದು ನಾನು ಉತ್ತಮ ಟೆನಿಸ್ ಆಡಿಲ್ಲ. ಸ್ಟೀಫನ್ಸ್ ನನ್ನ ನೆಚ್ಚಿನ ಆಟಗಾರ್ತಿ ಹಾಗೂ ಆತ್ಮೀಯ ಗೆಳತಿ.ಆಕೆ ಪ್ರಶಸ್ತಿ ಗೆದ್ದುಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ’’ಎಂದು ಮ್ಯಾಡಿಸನ್ ಪ್ರತಿಕ್ರಿಯಿಸಿದರು.

 ಈ ವರ್ಷದ ವಿಂಬಲ್ಡನ್ ಓಪನ್‌ನಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗಿದ್ದ ಸ್ಟೀಫನ್ಸ್ ಯುಎಸ್ ಓಪನ್‌ಗಿಂತ ಮೊದಲು ನಡೆದಿದ್ದ ಟೊರಾಂಟೊ ಹಾಗೂ ಸಿನ್ಸಿನಾಟಿ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು. ಇದೀಗ ಯುಎಸ್ ಓಪನ್ ಚಾಂಪಿಯನ್ ಆಗಿರುವ ಸ್ಟೀಫನ್ಸ್ ಸೋಮವಾರ ಬಿಡುಗಡೆಯಾಗಲಿರುವ ವಿಶ್ವ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ 17ನೆ ಸ್ಥಾನಕ್ಕೇರುವುದು ದೃಢಪಟ್ಟಿದೆ. ರನ್ನರ್-ಅಪ್ ಪ್ರಶಸ್ತಿ ಪಡೆದಿರುವ ಕೀಯ್ಸಿ 1.825 ಮಿಲಿಯನ್ ಡಾಲರ್ ಬಹುಮಾನ ಪಡೆದಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ 12ನೆ ಸ್ಥಾನಕ್ಕೇರಲಿದ್ದಾರೆ.

        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News