"ಕಸದ ತೊಟ್ಟಿಯೊಂದಿಗೆ ಸೆಲ್ಫಿ ತೆಗೆಯಿರಿ, ಸ್ಮಾರ್ಟ್ ಫೋನ್ ಗೆಲ್ಲಿ"

Update: 2017-09-11 07:50 GMT

ಜಮ್ಶೆಡ್ಪುರ, ಸೆ.11: ಕಸದ ತೊಟ್ಟಿಯೊಂದಿಗೆ ಅತ್ಯುತ್ತಮ ಸೆಲ್ಫಿ ತೆಗೆದವರಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಜಾರ್ಖಂಡ್ ರಾಜ್ಯದ ಜಮ್ಶೆದ್‍ಪುರದಲ್ಲಿನ ಸ್ಥಳೀಯಾಡಳಿತ ಸಂಸ್ಥೆ  ಘೋಷಿಸಿದೆ. ಸರಕಾರದ 'ಸ್ವಚ್ಛ ಭಾರತ' ಅಭಿಯಾನದಂಗವಾಗಿ ಈ ಬಹುಮಾನ ಘೋಷಿಸಲಾಗಿದೆ. ಕಸದ ತೊಟ್ಟಿಯನ್ನು ಉಪಯೋಗಿಸಲು ಜನರನ್ನು ಉತ್ತೇಜಿಸಲು ಹಾಗೂ ಹೆಚ್ಚು ಹೆಚ್ಚು ಯುವಜನರನ್ನು 'ಸ್ವಚ್ಛ ಭಾರತ' ಅಭಿಯಾನದಲ್ಲಿ ಭಾಗಿಯಾಗಿಸುವ ಉದ್ದೇಶದಿಂದ ಈ  ಬಹುಮಾನ ಘೋಷಿಸಲಾಗಿದೆ.

ಎಲ್ಲಾ  ಸೆಲ್ಫಿ ಪ್ರವೇಶ ಪತ್ರಗಳನ್ನು ಪರಿಗಣಿಸಿ ಲಕ್ಕಿ ಡ್ರಾ  ಮೂಲಕ ಮೂರು ಮಂದಿ ವಿಜೇತರನ್ನು ಆರಿಸಲಾಗುವುದು. ಅವರಿಗೆ ಗಾಂಧಿ ಜಯಂತಿಯಂದು ಸ್ವಚ್ಛತಾ ದಿವಸ್ ಅಂಗವಾಗಿ  ಸ್ಮಾರ್ಟ್ ಫೋನ್ ಬಹುಮಾನಗಳನ್ನು  ನೀಡಲಾಗುವುದು. ಮೊದಲ 50 ಸೆ ಸೆಲ್ಫಿಗಳಿಗೆ ಸರಕಾರದಿಂದ ಪ್ರಮಾಣಪತ್ರವೂ ಲಭ್ಯವಾಗಲಿದೆ.

ಸ್ಥಳೀಯ ಮ್ಯಾಂಗೋ ಏರಿಯಾ ನೋಟಿಫೈಡ್  ಕಮಿಟಿ ಕಚೇರಿಗೆ ಸೆಲ್ಫಿಗಳನ್ನು ಕಳುಹಿಸಬೇಕು ಇಲ್ಲವೇ ಇದಕ್ಕೆಂದೇ ವಿಶೇಷವಾಗಿ ತೆರೆಯಲಾದ ಸಮಿತಿಯ ಫೇಸ್ ಬುಕ್ ಪುಟದಲ್ಲಿ ಅದನ್ನು ಶೇರ್ ಮಾಡಬಹುದಾಗಿದೆ. ಈ ಲಕ್ಕಿ ಡ್ರಾದಲ್ಲಿ ಭಾಗವಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30 ಆಗಿದೆ.
ಇಂದಿನ ಯುವಜನತೆಗೆ ಸೆಲ್ಫಿ ಅತ್ಯಂತ ಪ್ರಿಯವಾಗಿರುವುದರಿಂದ ಈ ಸ್ಪರ್ಧೆಯನ್ನು ಆಯೋಜಿಸಿ ಯುವಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನುಂಟು ಮಾಡಲು ನಿರ್ಧರಿಸಲಾಯಿತು ಎಂದು ಸಮಿತಿಯ ವಿಶೇಷಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಕುಡಿಯುವ ನೀರು ಮತ್ತು ಸ್ವಚ್ಛತಾ ಇಲಾಖೆಯು ಎಲ್ಲಾ ಸರಕಾರಿ ಶಾಲಾ ಶಿಕ್ಷಕರಿಗೆ ತಮ್ಮ ಮನೆಯ ಶೌಚಾಲಯವೂ ಕಾಣಿಸುವ ಸೆಲ್ಫಿಗಳನ್ನು ಕಳುಹಿಸುವಂತೆ ಹೇಳಿತ್ತು. ಎಲ್ಲಾ ಶಿಕ್ಷಕರೂ ಶೌಚಾಲಯಗಳನ್ನು ಬಳಸುವಂತೆ ಮಾಡುವುದೇ ಇದರ ಉದ್ದೇಶವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News