×
Ad

ನಾಳೆ ಆಸ್ಟ್ರೇಲಿಯ-ಮಂಡಳಿ ಅಧ್ಯಕ್ಷರ ಇಲೆವೆನ್ ಅಭ್ಯಾಸ ಪಂದ್ಯ

Update: 2017-09-11 23:58 IST

ಚೆನ್ನೈ, ಸೆ.11: ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನು ಆಡಲು ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡ ಮಂಗಳವಾರ ಇಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಎದುರಿಸಲಿದೆ.

 ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ 20 ರನ್‌ಗಳ ಸೋಲು ಅನುಭವಿಸಿದ್ದರೂ, ಎರಡನೆ ಟೆಸ್ಟ್‌ನಲ್ಲಿ ಭರ್ಜರಿ ಗೆಲುವಿನೊಂದಿಗೆ ಸರಣಿಯನ್ನು 1-1 ಡ್ರಾ ಸಾಧಿಸಿತ್ತು.

50 ಓವರ್‌ಗಳ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯ ತಂಡ ಭಾರತದಲ್ಲಿ ಸ್ಪಿನ್ನರ್‌ಗಳ  ಕಠಿಣ ಸವಾಲನ್ನು ಎದುರಿಸುವಂತಾಗಿದೆ.

  ಮಂಡಳಿ ಅಧ್ಯಕ್ಷರ ತಂಡದಲ್ಲಿ ಅನನುಭವಿಗಳು ಹೆಚ್ಚಿನ ಸಂಖ್ಯೆಯಲಿದ್ದಾರೆ. ಗುರುಕೀರತ್ ಮಾನ್ ಅವರು 2016ರಲ್ಲಿ ಆಸ್ಟ್ರೇಲಿಯ ವಿರುದ್ಧ 3 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

  ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಸ್ಟಾರ್ ಕ್ರಿಕೆಟಿಗರಾದ ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಮತ್ತು ವಾಶಿಂಗ್ಟನ್ ಸುಂದರ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಾಹುಲ್ ತ್ರಿಪಾಠಿ ಅವರು ಪುಣೆ ಸೂಪರ್‌ಜೈಂಟ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್. ರಾಣಾ ಅವರು ಮುಂಬೈ ಇಂಡಿಯನ್ಸ್‌ನ ಅಗ್ರ ಸರದಿಯ ದಾಂಡಿಗ.

ವಾಶಿಂಗ್ಟನ್ ಸುಂದರ್ ಅವರು ಪುಣೆ ಸೂಪರ್‌ಜೈಂಟ್ಸ್ ತಂಡದ ಬೌಲರ್.

ಟೀಮ್ ಇಂಡಿಯಾದ ಬಹುತೇಕ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಈ ಕಾರಣದಿಂದಾಗಿ ಅವರೆಲ್ಲ ಅಭ್ಯಾಸ ಪಂದ್ಯದಿಂದ ದೂರ ಉಳಿದಿದ್ದಾರೆ. ಹೊಸಮುಖಗಳಿಗೆ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಆಯ್ಕೆ ಸಮಿತಿ ಅವಕಾಶ ನೀಡಿದೆ.

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ತಲಾ ಎರಡು ಶತಕ ಸಿಡಿಸಿದ್ದರು. ಅವರು ಉತ್ತಮ ಫಾರ್ಮ್‌ನ್ನು ಮುಂದುವರಿಸುವುದನ್ನು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಈಗಾಗಲೇ ಆಡಿರುವ ಅನುಭವ ಹೊಂದಿರುವ ಆ್ಯರೊನ್ ಫಿಂಚ್, ಗ್ಲೆನ್ ಮ್ಯಾಕ್ಸ್‌ವೆಲ್ ಸರಣಿಯಲ್ಲಿ ಮಿಂಚುವುದನ್ನು ನಿರೀಕ್ಷಿಸಲಾಗಿದೆ.ಆಸ್ಟ್ರೇಲಿಯ ತಂಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಲ್‌ರೌಂಡರ್‌ಗಳಿದ್ದಾರೆ.ಜೇಮ್ಸ್ ಫಾಕ್ನರ್, ಮಾರ್ಕುಸ್ ಸ್ಟೋನಿಸ್, ನಥಾನ್ ಕೌಲ್ಟರ್ ನೀಲ್ ಅವರು ಭಾರತದಲ್ಲಿ ಐಪಿಎಲ್‌ನಲ್ಲಿ ಆಡುವ ಮೂಲಕ ಭಾರತದ ವಾತಾವರಣವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ.

ಆ್ಯರೊನ್ ಫಿಂಚ್‌ಗೆ ಅಭ್ಯಾಸ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ.

<ಅಧ್ಯಕ್ಷರ ಇಲೆವೆನ್ : ಗುರುಕೀರತ್ ಮಾನ್(ನಾಯಕ), ರಾಹುಲ್ ತ್ರಿಪಾಠಿ, ಮಾಯಾಂಕ್ ಅಗರ್‌ವಾಲ್, ಶ್ರೀವತ್ಸ ಗೋಸ್ವಾಮಿ, ಶಿವಮ್ ಚೌಧರಿ, ನಿತೀಶ್ ರಾಣಾ, ಗೋವಿಂದ ಪೊದ್ದಾರ್, ಅಕ್ಷಯ್ ಕರ್ನೆವಾರ್, ಕುಲ್ವಾನ್ ಖೆಜ್ರೋಲಿಯಾ, ಕ್ರುಶಾಂಗ್ ಪಾಟೇಲ್, ಅವೇಶ್ ಖಾನ್, ಸಂದೀಪ್ ಶರ್ಮ, ವಾಶಿಂಗ್ಟನ್ ಸುಂದರ್, ರಾಹಿಲ್ ಶಾಹ್.

<ಆಸ್ಟ್ರೇಲಿಯ ತಂಡ: ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಆ್ಯಸ್ಟನ್ ಅಗರ್, ಹಿಲ್ಟನ್ ಕಾರ್ಟ್‌ವೈಟ್, ನಥಾನ್ ಕೌಲ್ಟರ್ ನೀಲ್, ಪ್ಯಾಟ್ರಿಕ್ ಕಮಿನ್ಸ್, ಜೇಮ್ಸ್ ಫಾಕ್ನರ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕುಸ್ ಸ್ಟೋನಿಸ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಆ್ಯಡಮ್ ಝಾಂಪ ಮತ್ತು ಕೇನ್ ರಿಚರ್ಡ್ಸನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News