ನವರಾತ್ರಿ: 500ಕ್ಕೂ ಅಧಿಕ ಮಾಂಸದಂಗಡಿ ಬಂದ್ ಮಾಡಿದ ಶಿವಸೈನಿಕರು

Update: 2017-09-22 15:09 GMT

ಗುರ್ಗಾಂವ್, ಸೆ. 22: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಶಿವಸೇನೆ ಕಾರ್ಯಕರ್ತರು 500ಕ್ಕೂ ಅಧಿಕ ಮಾಂಸದಂಗಡಿಗಳನ್ನು ಬಂದ್ ಮಾಡಿಸಿದರು. ನಾವು ಪ್ರತಿ ಮಾಂಸ ಹಾಗೂ ಕೋಳಿ ಅಂಗಡಿಗಳಿಗೆ ನೋಟಿಸ್ ಕಳುಹಿಸಿದ್ದೇವೆ. ಈ ಬಾರಿ ಕೆಎಫ್‌ಸಿ ಹಾಗೂ ತಮ್ಮ ರೆಸ್ಟೋರೆಂಟ್‌ಗಳಲ್ಲಿ ಮುಕ್ತವಾಗಿ ಚಿಕನ್ ಖಾದ್ಯಗಳನ್ನು ಪೂರೈಸದ ರೆಸ್ಟೋರೆಂಟ್‌ಗಳಿಗೆ ನೋಟಿಸು ಕಳುಹಿಸಿಲ್ಲ. ಸೂಚನೆ ಪಾಲಿಸದೇ ಇದ್ದವರು ಪರಿಸ್ಥಿತಿ ಎದುರಿಸ ಬೇಕಾಗಬಹುದು ಎಂದು ಗುರ್ಗಾಂವ್‌ನ ಶಿವಸೇನಾ ಮುಖ್ಯಸ್ಥ ರಿತು ರಾಜ್ ತಿಳಿಸಿದ್ದಾರೆ.

ನವರಾತ್ರಿ ಮುಗಿಯುವ ವರೆಗೆ 9 ದಿನಗಳ ಕಾಲ ತಮ್ಮ ಅಂಗಡಿಗಳನ್ನು ಮುಚ್ಚುವಂತೆ ಮಾಂಸಾಹಾರಿ ಆಹಾರದಂಗಡಿಗಳ ಮಾಲಕರಿಗೆ ಶಿವಸೈನಿಕರು ನೋಟಿಸು ನೀಡಿದ್ದಾರೆ. ಪಾಲಂ ವಿಹಾರ್‌ನಲ್ಲಿ ಸೇರಿದ ಶಿವಸೇನೆ ಕಾರ್ಯಕರ್ತರು ಸೂರತ್‌ನಗರ್, ಅಶೋಕ್ ವಿಹಾರ್, ಸೆಕ್ಟರ್ 5 ಹಾಗೂ 9, ಪಟೌಡಿ ಚೌಕ, ಜಾಕೋಬ್‌ಪುರ, ಸದಾರ್ ಬಝಾರ್, ಖಾಂಡ್ಸಾ ಅನಜ್ ಮಂಡಿ, ಬಸ್ ಸ್ಟಾಂಡ್, ಡಿಎಲ್‌ಎಫ್ ಪ್ರದೇಶ, ಸೋಹ್ನಾ ಹಾಗೂ ಸೆಕ್ಟರ್ 14 ಮಾರುಕಟ್ಟೆಯಲ್ಲಿ ಮಾಂಸದಂಗಡಿಗಳನ್ನು ಬಂದ್ ಮಾಡಿದರು.

ನವರಾತ್ರಿ ಹಿನ್ನೆಲೆಯಲ್ಲಿ ಮುಂದಿನ 9 ದಿನಗಳ ಕಾಲ ಮಾಂಸದಂಗಡಿಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಿ ನಾವು ಗುರ್ಗಾಂವ್‌ನ ಉಪ ಆಯುಕ್ತ ವಿನಯ್ ಪ್ರತಾಪ್ ಸಿಂಗ್ ಅವರಿಗೆ ಜ್ಞಾಪನಾ ಪತ್ರ ನೀಡಿದ್ದೇವೆ. ಆದರೆ, ಜಿಲ್ಲಾಡಳಿತ ಮಾಂಸದಂಗಡಿ ಮಾಲಕರಿಗೆ ನಿರ್ದೇಶನ ನೀಡಿಲ್ಲ ಎಂದು ರಾಜ್ ಹೇಳಿದ್ದಾರೆ.

ನಾವು ಈ ವಿಷಯದ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಬಾರದು. ಶಿವಸೇನೆ ಕಾರ್ಯಕರ್ತರು ಬಲವಂತವಾಗಿ ಮಾಂಸದಂಗಡಿಗಳನ್ನು ಮುಚ್ಚಿಸಿದರೆ, ಅವರ ವಿರುದ್ಧ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಈ ವಿಚಾರಕ್ಕೆ ದೂರು ದಾಖಲಿಸುವುದನ್ನು ನಾವು ಕಾಯುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News