149 ಭಾರತೀಯ ಕೈದಿಗಳಿಗೆ ಕ್ಷಮಾದಾನ ನೀಡಿದ ಶಾರ್ಜಾ ದೊರೆಗೆ ‘ಥ್ಯಾಂಕ್ಸ್’ ಹೇಳಿದ ಸುಷ್ಮಾ
ಹೊಸದಿಲ್ಲಿ,ಸೆ.27 : ಒಟ್ಟು 149 ಮಂದಿ ಭಾರತೀಯ ಕೈದಿಗಳಿಗೆ ಕ್ಷಮಾದಾನ ನೀಡಿದ್ದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಶಾರ್ಜಾದ ದೊರೆ ಸುಲ್ತಾನ್ ಬಿನ್ ಮೊಹಮ್ಮದ್ ಅಲ್-ಖಾಸಿಮಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಸುಷ್ಮಾ ಟ್ವೀಟ್ ಒಂದನ್ನೂ ಮಾಡಿದ್ದಾರೆ.
ಸಣ್ಣ ಪುಟ್ಟ ಅಪರಾಧಗಳಿಗಾಗಿ ಬಂಧಿತರಾಗಿರುವ ಭಾರತೀಯರು ಹಾಗೂ ಇತರರಿಗೆ ಕ್ಷಮಾದಾನ ನೀಡಿ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಶಾರ್ಜಾದ ಅಮೀರ್ ಅವರು ಘೋಷಿಸಿದ್ದರು.
ಶಾರ್ಜಾದಲ್ಲಿ ಮೂರು ವರ್ಷ ಜೈಲು ಶಿಕ್ಷೆಯನ್ನು ಪೂರೈಸಿದ ಕೇರಳಿಗರ ಬಿಡುಗಡೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ಅಲ್-ಖಾಸಿಮಿ ಅವರಿಗೆ ಮನವಿ ಮಾಡಿದ್ದರು. ರಾಜಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ ಶಾರ್ಜಾದ ದೊರೆಗೆ ಕಲ್ಲಿಕೋಟೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ಸಮಾರಂಭದಲ್ಲಿ ಪಿಣರಾಯಿ ಮೇಲಿನ ಮನವಿ ಮಾಡಿದ್ದರು.
ಇದಕ್ಕೆ ತಮ್ಮ ಭಾಷಣದಲ್ಲಿ ಸ್ಪಂದಿಸಿದ ಅಲ್ ಖಾಸಿಮಿ, ತಮ್ಮ ದೇಶದಲ್ಲಿ ಕೇರಳದ ಕೈದಿಗಳು ಮಾತ್ರವಲ್ಲದೆ ಬೇರೆ ದೇಶಗಳ ಕೈದಿಗಳೂ ಇದ್ದಾರೆಂದು ಹೇಳಿದರಲ್ಲದೆ ಅಷ್ಟೊಂದು ಗಂಭೀರವಲ್ಲದ ಅಪರಾಧ ನಡೆಸಿ ಜೈಲಿನಲ್ಲಿರುವವರನ್ನೆಲ್ಲಾ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದರು.
ಸುಲ್ತಾನ್ ಬಿನ್ ಮೊಹಮ್ಮದ್ ಅಲ್-ಖಾಸಿಮಿ ಐದು ದಿನಗಳ ಭೇಟಿಗಾಗಿ ಕೇರಳಕ್ಕೆ ರವಿವಾರ ಆಗಮಿಸಿದ್ದರು.