×
Ad

ಗುಜರಾತ್ ದಲಿತರಿಂದ ‘ಮೀಸೆ ಸೆಲ್ಫಿ’ ಆಂದೋಲನ

Update: 2017-10-03 22:02 IST

ಅಹ್ಮದಾಬಾದ್, ಅ.3: ಮೀಸೆ ಬೆಳೆಸಿಕೊಂಡಿದ್ದಾರೆಂಬ ಕಾರಣಕ್ಕಾಗಿ ದಲಿತ ಸಮುದಾಯದ ಇಬ್ಬರು ಯುವಕರನ್ನು, ರಜಪೂತ ಸಮುದಾಯದವರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆಯ ಬಳಿಕ, ಗುಜರಾತ್‌ನ ದಲಿತರು ತಮ್ಮ ಮೀಸೆಯನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿರುವ ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಮೂಲಕ ವಿನೂತನ ಆಂದೋಲನವನ್ನು ಆರಂಭಿಸಿದ್ದಾರೆ.

ಕಳೆದ ತಿಂಗಳು ಗುಜರಾತ್‌ನ ಗಾಂಧಿನಗರದ ಸಮೀಪದ ಲಿಂಬೊದರ ಗ್ರಾಮದಲ್ಲಿ ಸೆಪ್ಟೆಂಬರ್ 25 ಹಾಗೂ 29ರಂದು ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೀಸೆ ಹೊಂದಿದ್ದಾರೆಂಬ ಕಾರಣಕ್ಕಾಗಿ ದಲಿತ ಸಮುದಾಯದ ಇಬ್ಬರು ಯುವಕರ ಮೇಲೆ ರಜಪೂತ ಸಮುದಾಯದ ಸದಸ್ಯರು ಮಾರಣಾಂತಿಕವಾಗಿ ಥಳಿಸಿದ್ದರು.

 ಈ ದೌರ್ಜನ್ಯವನ್ನು ಪ್ರತಿಭಟಿಸಿರುವ ಗುಜರಾತ್‌ನ ದಲಿತರು ಥಳಿತಕ್ಕೊಳಗಾದ ಯುವಕರಲ್ಲೊಬ್ಬನಾದ ಪಿಯೂಶ್ ಪರಮಾರ್‌ ಬೆಂಬಲಕ್ಕಾಗಿ ಟ್ವಿಟರ್ ನಲ್ಲಿ ರೈಟ್ ಟು ವೌಸ್ಟೆಕ್ (ಮೀಸೆ ಹೊಂದುವ ಹಕ್ಕು) ಹ್ಯಾಶ್‌ಟ್ಯಾಗ್ ಎಂಬ ಆಂದೋಲನವನ್ನು ಆರಂಭಿಸಿದ್ದಾರೆ.

 ಕಳೆದ ರವಿವಾರ ಮುಂಜಾನೆ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಗರ್ಭಾ ನೃತ್ಯವೊಂದರಲ್ಲಿ ಪಾಲ್ಗೊಂಡಿದ್ದಕ್ಕಾಗಿ 21 ವರ್ಷ ವಯಸ್ಸಿನ ದಲಿತ ಯುವಕನನ್ನು ಪಟೇಲ್ ಸಮುದಾಯಕ್ಕೆ ಸೇರಿದವರು ಬರ್ಬರವಾಗಿ ಥಳಿಸಿ ಹತ್ಯೆಗೈದಿದ್ದರು.

ಕಳೆದ ವರ್ಷದ ಜುಲೈನಲ್ಲಿ ಉನಾ ಪಟ್ಟಣ ಸಮೀಪದ ಗ್ರಾಮವೊಂದರಲ್ಲಿ ಮೃತ ಗೋವಿನ ಚರ್ಮ ಸುಲಿಯುತ್ತಿದ್ದರೆಂಬ ಕಾರಣಕ್ಕಾಗಿ ನಾಲ್ವರು ದಲಿತರ ನಗ್ನಗೊಳಿಸಿ, ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯ ವಿರುದ್ಧ ಗುಜರಾತ್‌ನಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News