ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಮನಃಶಾಸ್ತ್ರೀಯ ಪರಿಹಾರ ಕಂಡುಕೊಳ್ಳಿ: ಪೊಲೀಸರಿಗೆ ರಾಜನಾಥ್ ಸಿಂಗ್ ಸಲಹೆ

Update: 2017-10-07 14:13 GMT

ಮೀರತ್, ಅ. 2: ಇಪ್ಪತ್ತೊಂದನೇ ಶತಮಾನದ ಪೊಲೀಸರು ಅಮಾನುಷ ಶಕ್ತಿಯಾಗಿರಲು ಸಾಧ್ಯವಿಲ್ಲ. ಅವರು ನಾಗರಿಕ ಘಟಕವಾಗಿರಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ಗಲಭೆ ಹಾಗೂ ಪ್ರತಿಭಟನೆಯಂತಹ ಸನ್ನಿವೇಶಗಳ ಸವಾಲನ್ನು ನಿರ್ವಹಿಸುವ ಸಂದರ್ಭ ತಾಳ್ಮೆ ವಹಿಸಿ ಎಂದು ಅವರು ಪೊಲೀಸ್ ಸಿಬ್ಬಂದಿಗೆ ಕಿವಿಮಾತು ಹೇಳಿದ್ದಾರೆ. ಪ್ರತಿಭಟನೆ ಅಥವಾ ಗಲಭೆಯಂತಹ ಸನ್ನಿವೇಶಗಳ ಸಂದರ್ಭ ಕ್ರೋಧಗೊಂಡ ಗುಂಪಿನ ಮನಸ್ಸನ್ನು ತಿರುಗಿಸಲು ಹಾಗೂ ನಿಯಂತ್ರಿಸಲು ನೂತನ ತಂತ್ರಜ್ಞಾನ ಹಾಗೂ ಮನಃಶಾಸ್ತ್ರೀಯ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯದ ಪೊಲೀಸ್ ಪಡೆಯನ್ನು ಸಚಿವರು ಆಗ್ರಹಿಸಿದರು.

ಕ್ಷಿಪ್ರ ಕಾರ್ಯ ಪಡೆಯ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಅವರು ಭದ್ರತಾ ಸಿಬ್ಬಂದಿ ಉದ್ದೇಶಿಸಿ ಮಾತನಾಡಿದರು.

ಜಾತಿವಾದ, ಧರ್ಮ ಹಾಗೂ ಪ್ರಾದೇಶಿಕವಾದದ ಅಡಿಯಲ್ಲಿ ದೇಶವನ್ನು ವಿಭಜಿಸಲು ಪ್ರಯತ್ನಿಸುವ ಘಟನೆಗಳನ್ನು ಭದ್ರತಾ ಸಿಬ್ಬಂದಿ ಪರಿಣಾಮಕಾರಿಯಾಗಿ ಪರಿಶೀಲಿಸಬೇಕು ಎಂದು ಸಿಂಗ್ ಆಗ್ರಹಿಸಿದರು.

ಕೆಲವು ಬಾರಿ ಪೊಲೀಸರು ಸ್ಪಲ್ಪಮಟ್ಟಿಗೆ ಬಲ ಪ್ರಯೋಗಿಸಬೇಕು ಎಂಬ ಅರಿವು ನನಗಿದೆ. ಆದರೆ, ಇಂತಹ ಸನ್ನಿವೇಶಗಳಲ್ಲಿ ವಿವೇಕ ಅಗತ್ಯವಿದೆ ಎಂದು ಸಿಂಗ್ ಹೇಳಿದರು. ಗುಂಪು ನಿಯಂತ್ರಣ ಹಾಗೂ ಆರಕ್ಷಣೆಯ ಸಂದರ್ಭ ಕಡಿಮೆ ಮಾರಕ ಪರಿಹಾರಗಳನ್ನು ಬಳಸುವ ಬಗ್ಗೆ ಗಮನಹರಿಸಬೇಕು ಎಂದು ಬಿಪಿಆರ್‌ಡಿ ಸಿಬ್ಬಂದಿಯಲ್ಲಿ ಸಿಂಗ್ ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News