ಇಂಗ್ಲೆಂಡ್ ದಾಳಿಗೆ ಚಿಲಿ ಚೆಲ್ಲಾಪಿಲ್ಲಿ, ಫ್ರಾನ್ಸ್ ಗೆ ಭರ್ಜರಿ ಜಯ
ಕೋಲ್ಕತಾ, ಅ.8: ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಇಂಗ್ಲೆಂಡ್ ತಂಡ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ರವಿವಾರ ನಡೆದ ‘ಎಫ್’ ಗುಂಪಿನ ಪಂದ್ಯದಲ್ಲಿ ಚಿಲಿ ವಿರುದ್ಧ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿ ಗೆಲುವಿನ ಆರಂಭ ಪಡೆದಿದೆ.
ಇಂಗ್ಲೆಂಡ್‌ನ ಪರ ಸ್ಟಾರ್ ವಿಂಗರ್ ಜಾಡಾನ್ ಸ್ಯಾಂಕೊ ಅವಳಿ ಗೋಲುಗಳನ್ನು(51ನೆ ಹಾಗೂ 60ನೆ ನಿಮಿಷ) ಬಾರಿಸಿದರು. ಕಾಲುಮ್ ಹಡ್ಸನ್ ಒಡೊಯಿ(5ನೆ) ಹಾಗೂ ಏಂಜೆಲ್ ಗೋಮ್ಸ್ (81ನೆ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತಿರುವ ಚಿಲಿ ತಂಡ ಇಂಗ್ಲೆಂಡ್‌ನ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾಯಿತು. ಕೇವಲ ನಾಲ್ಕು ಬಾರಿ ಗೋಲಿಗಾಗಿ ಯತ್ನಿಸಿದ ಚಿಲಿ ಪ್ರತಿಬಾರಿಯೂ ಗುರಿ ತಪ್ಪಿತು.
79ನೆ ನಿಮಿಷದಲ್ಲಿ ಗೋಲ್‌ಕೀಪರ್ ಜುಲಿಯೊ ಬಾರ್ಕ್ವಿಝ್ ರೆಡ್ ಕಾರ್ಡ್ ಪಡೆದ ಹಿನ್ನೆಲೆಯಲ್ಲಿ ಚಿಲಿ 10 ಆಟಗಾರರೊಂದಿಗೆ ಆಡಬೇಕಾಯಿತು. ಇಂಗ್ಲೆಂಡ್ ಮೊದಲಾರ್ಧ ದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು. ಸ್ಯಾಂಕೊ ಆಕರ್ಷಕ ಆಟದಿಂದ ಗಮನ ಸೆಳೆದರು. ಹಡ್ಸನ್ 5ನೆ ನಿಮಿಷದಲ್ಲಿ ಚಿಲಿ ಗೋಲುಕೀಪರ್‌ರನ್ನು ವಂಚಿಸಿ ಇಂಗ್ಲೆಂಡ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಯಂಗ್ ಲಯನ್ಸ್ ಇಂಗ್ಲೆಂಡ್ ತಂಡ ದ್ವಿತೀಯಾರ್ಧದಲ್ಲಿ ಇನ್ನೂ ಮೂರು ಗೋಲು ಬಾರಿಸಿ ಚಿಲಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು.