ಮೊದಲ ಪಂದ್ಯದಲ್ಲಿ ಭಾರತಕ್ಕೆ ಜಪಾನ್ ಎದುರಾಳಿ

Update: 2017-10-10 18:11 GMT

  ಢಾಕಾ, ಅ.10: ಬಾಂಗ್ಲಾದೇಶದಲ್ಲಿ ಬುಧವಾರ ಆರಂಭಗೊಳ್ಳಲಿರುವ ಪುರುಷರ ಏಷ್ಯಾ ಕಪ್ ಹಾಕಿ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡ ಜಪಾನ್‌ನ್ನು ಎದುರಿಸಲಿದೆ.

ಹೊಸ ಕೋಚ್ ಶೋರ್ಡ್ ಮ್ಯಾರಿಜ್ ಅವರಿಗೆ ಈ ಟೂರ್ನಮೆಂಟ್ ಹೊಸ ಸವಾಲಾಗಿದೆ. ರೋಲಂಟ್ ಓಲ್ಟಮನ್ಸ್ ನಿರ್ಗಮನದ ಬಳಿಕ ಭಾರತ ತಂಡ ಹೊಸ ಕೋಚ್ ಮಾರ್ಗದರ್ಶನದಲ್ಲಿ ಏಷ್ಯಾಕಪ್‌ನಲ್ಲಿ ಸವಾಲು ಎದುರಿಸಲಿದೆ. ಓಲ್ಟಮನ್ಸ್ ಅವರು ನಾಲ್ಕು ವರ್ಷಗಳ ಕಾಲ ಭಾರತದ ಹಾಕಿ ತಂಡದ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಭಾರತ ಏಷ್ಯನ್ ಹಾಕಿಯಲ್ಲಿ 6ನೆ ಸ್ಥಾನಕ್ಕೆ ತಲುಪಿತ್ತು. ಕಳೆದ ಆವೃತ್ತಿಯ ಏಷ್ಯಾಕಪ್‌ನಲ್ಲಿ ಭಾರತ ಎರಡನೆ ಸ್ಥಾನ ಪಡೆದಿತ್ತು. ಮಿಡ್ ಫೀಲ್ಡರ್ ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜಪಾನ್ , ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಆತಿಥೇಯ ಬಾಂಗ್ಲಾದೇಶ ತಂಡದ ಸವಾಲು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಕೊರಿಯಾ, ಮಲೇಷ್ಯಾ, ಚೀನಾ ಮತ್ತು ಓಮನ್ ಸ್ಥಾನ ಗಿಟ್ಟಿಸಿಕೊಂಡಿವೆೆ.

 ಮೊದಲ ಪಂದ್ಯದಲ್ಲಿ ಭಾರತ ಗೆಲ್ಲುವುದು ಮುಖ್ಯವಾಗಿದೆ. ಅ.13ರಂದು ಬಾಂಗ್ಲಾದೇಶ ವಿರುದ್ಧ ಮತ್ತು ಅ.15ರಂದು ಪಾಕಿಸ್ತಾನವನ್ನು ಎದುರಿಸಲಿದೆ. ‘‘ಮೊದಲ ಪಂದ್ಯ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಜಪಾನ್ ವಿರುದ್ಧ ಭಾರತ ಗೆಲುವಿನ ಪ್ರಯತ್ನ ನಡೆಸಲಿದೆ ’’ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ತಿಳಿಸಿದ್ದಾರೆ.

 ಜಪಾನ್ ವಿರುದ್ಧ ಭಾರತ ಸುಲ್ತಾನ್ ಅಝ್ಲಾನ್ ಷಾ ಕಪ್ ಟೂರ್ನಮೆಂಟ್‌ನಲಿ ಕೊನೆಯ ಬಾರಿ ಆಡಿತ್ತು. 4-3 ಅಂತರದಲ್ಲಿ ಗೆಲುವು ದಾಖಲಿಸಿತ್ತು. ಜಪಾನ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಭಾರತ ವಿರುದ್ಧ ಗೆಲುವಿಗೆ ಕಠಿಣ ಹೋರಾಟ ನಡೆಸಿದ್ದ ಜಪಾನ್ ಸುಲ್ತಾನ್ ಅಝ್ಲಾನ್ ಷಾ ಹಾಕಿ ಕಪ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ 3-2 ಅಂತರದಲ್ಲಿ ಸೋಲುಣಿಸಿತ್ತು.

 ‘‘ ಜಪಾನ್ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂಡಗಳಲ್ಲಿ ಒಂದಾಗಿದೆ. ನಾವು ಈಗಾಗಲೇ ಜಪಾನ್‌ನ ಆಟವನ್ನು ನೋಡಿದ್ದೇವೆ. ಜಪಾನನ್ನು ಯಾವತ್ತೂ ನಾವು ಲಘುವಾಗಿ ಪರಿಗಣಿಸುವುದಿಲ್ಲ’’ ಎಂದು ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ಭುವನೇಶ್ವರದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ವರ್ಲ್ಡ್ ಲೀಗ್ ಫೈನಲ್ ಮೊದಲು ಭಾರತಕ್ಕೆ ಏಷ್ಯಾ ಕಪ್ ಕೊನೆಯ ಅಂತಾರಾಷ್ಟ್ರೀಯ ಟೂರ್ನಮೆಂಟ್ ಆಗಿದೆ.

 ತಂಡದಲ್ಲಿರುವ ಯುವ ಆಟಗಾರರು ಯುರೋಪ್ ಪ್ರವಾಸದಲ್ಲಿ ಉತ್ತಮ ಅನುಭವ ಪಡೆದಿದ್ದಾರೆ. ಗೋಲ್ ಕೀಪರ್ ಆಕಾಶ್ ಚಿಕ್ತೆ ಮತ್ತು ಸೂರಜ್ ಕರ್ಕೇರ ತಂಡಕ್ಕೆ ವಾಪಸಾಗಿದ್ದಾರೆ. ಡಿಫೆಂಡರ್‌ಗಳಾದ ಹರ್ಮನ್‌ಪ್ರೀತ್ ಸಿಂಗ್ ಮತ್ತ್ತು ಸುರೇಂದ್ರ ಕುಮಾರ್ ತಂಡಕ್ಕೆ ಮರಳಿದ್ದಾರೆ. ಅವರು ಯುರೋಪ್ ಪ್ರವಾಸಕ್ಕೆ ತೆರಳದೆ ವಿಶ್ರಾಂತಿ ಪಡೆದಿದ್ದರು. ಮಾಜಿ ನಾಯಕರುಗಳಾದ ಸರ್ದಾರ್ ಸಿಂಗ್, ಆಕಾಶ್‌ದೀಪ್ ಸಿಂಗ್, ಸತ್ಬೀರ್ ಸಿಂಗ್ ಮತ್ತು ಎಸ್.ವಿ. ಸುನೀಲ್ ತಂಡದಲ್ಲಿದ್ದಾರೆ. ಸುನೀಲ್ ಅವರು ಉಪನಾಯಕರಾಗಿದ್ದಾರೆ,

 ಮುಂದಿನ 15 ತಿಂಗಳಲ್ಲಿ ಪ್ರಮುಖ ಟೂರ್ನಮೆಂಟ್‌ಗಳಾದ ಹಾಕಿ ವರ್ಲ್ಡ್ ಲೀಗ್ ಫೈನಲ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ವರ್ಲ್ಡ್ ಕಪ್ ನಡೆಯಲಿದೆ. ಈ ಕಾರಣದಿಂದಾಗಿ ಭಾರತಕ್ಕೆ ತಂಡವನ್ನು ಬಲಿಷ್ಠವಾಗಿ ಕಟ್ಟಲು ಏಷ್ಯಾಕಪ್ ಸಹಾಯಕವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News