ದ್ವಿತೀಯ ಟೆಸ್ಟ್: ಶ್ರೀಲಂಕಾ ಜಯಭೇರಿ

Update: 2017-10-10 18:29 GMT

ದುಬೈ, ಅ.10: ಪಾಕ್ ವಿರುದ್ಧ ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೆ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ 68 ರನ್‌ಗಳಿಂದ ಜಯ ದಾಖಲಿಸಿದೆ.

   ಈ ಗೆಲುವಿನ ಮೂಲಕ ಶ್ರೀಲಂಕಾ 2-0 ಅಂತರದಿಂದ ಐತಿಹಾಸಿಕ ಸರಣಿ ಜಯಿಸಿದೆ. ಯುಎಇನಲ್ಲಿ ಟೆಸ್ಟ್ ಸರಣಿ ಜಯಿಸಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಪಾಕ್ ಏಳು ವರ್ಷಗಳ ಬಳಿಕ ಯುಎಇಯಲ್ಲಿ ಸರಣಿ ಸೋತಿದೆ. 2009ರಿಂದ ತವರು ಪಂದ್ಯಗಳನ್ನು ಯುಎಇಯಲ್ಲಿ ಆಡುತ್ತಿರುವ ಪಾಕ್ ಈತನಕ ಆಡಿರುವ 9 ಸರಣಿಗಳಲ್ಲಿ 5ರಲ್ಲಿ ಜಯ ಹಾಗೂ 4ರಲ್ಲಿ ಡ್ರಾ ಸಾಧಿಸಿತ್ತು. 2007ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸ್ವದೇಶದಲ್ಲಿ ಸೋತ ಬಳಿಕ ಮೊದಲ ಸ್ವದೇಶಿ ಸರಣಿ ಸೋತಿದೆ. ಎರಡನೆ ಬಾರಿ ವೈಟ್‌ವಾಶ್ ಅನುಭವಿಸಿದೆ. ಆರಂಭಿಕ ಆಟಗಾರ ಡಿ.ಕರುಣರತ್ನೆ (196)ಜೀವನಶ್ರೇಷ್ಠ ಬ್ಯಾಟಿಂಗ್ ಹಾಗೂ ಡಿ.ಪರೇರ ಸೂಪರ್ ಸ್ಪೆಲ್(5-98) ನೆರವಿನಿಂದ ಶ್ರೀಲಂಕಾ ಜಯಭೇರಿ ಬಾರಿಸಿದೆ. ಗೆಲುವಿಗೆ 317 ರನ್ ಗುರಿ ಪಡೆದಿದ್ದ ಪಾಕಿಸ್ತಾನ ಐದನೆ ದಿನವಾದ ಮಂಗಳವಾರ 5 ವಿಕೆಟ್‌ಗಳ ನಷ್ಟಕ್ಕೆ 198 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಮತ್ತೊಮ್ಮೆ ಕಳಪೆ ಆರಂಭ ಪಡೆದಿದ್ದ ಪಾಕ್ 248 ರನ್‌ಗೆ ಆಲೌಟಾಯಿತು.

ಅಸದ್ ಶಫೀಕ್(112) ಹಾಗೂ ನಾಯಕ ಸರ್ಫರಾಝ್ ಅಹ್ಮದ್(68)6ನೆ ವಿಕೆಟ್‌ಗೆ 173 ರನ್ ಜೊತೆಯಾಟ ನಡೆಸಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ, ಅಂತಿಮವಾಗಿ ಶ್ರೀಲಂಕಾ 68 ರನ್‌ಗಳ ರೋಚಕ ಜಯ ಸಾಧಿಸಿತು. ಭಾರತ ವಿರುದ್ಧ ಸ್ವದೇಶದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಶ್ರೀಲಂಕಾಕ್ಕೆ ಈ ಗೆಲುವು ಆತ್ಮವಿಶ್ವಾಸ ತಂದಿದೆ.

2ನೆ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಕರುಣರತ್ನೆ ಶತಕದ ಸಹಾಯದಿಂದ ಮೊದಲ ಇನಿಂಗ್ಸ್‌ನಲ್ಲಿ 482 ರನ್ ಗಳಿಸಿತು. 5 ವಿಕೆಟ್ ಗೊಂಚಲು ಪಡೆದಿದ್ದ ಪಾಕ್ ಸ್ಪಿನ್ನರ್ ಯಾಸಿರ್ ಶಾ ಲಂಕಾದ ಸ್ಕೋರನ್ನು 500ರೊಳಗೆ ನಿಯಂತ್ರಿಸಿದರು.

ಮೊದಲ ಇನಿಂಗ್ಸ್‌ನಲ್ಲಿ 262 ರನ್‌ಗೆ ಆಲೌಟಾ ಗಿದ್ದ ಪಾಕ್ ತಂಡ ಶ್ರೀಲಂಕಾಕ್ಕೆ 220 ರನ್ ಮುನ್ನಡೆ ಬಿಟ್ಟುಕೊಟ್ಟಿತು. 2ನೆ ಇನಿಂಗ್ಸ್‌ನಲ್ಲಿ ವಹಾಬ್ ರಿಯಾಝ್(4-41),ಹಾರಿಸ್ ಸೊಹೈಲ್(3-1)ಹಾಗೂ ಯಾಸಿರ್ ಶಾ(2-47)ದಾಳಿಗೆ ಸಿಲುಕಿದ ಶ್ರೀಲಂಕಾ ಕೇವಲ 96 ರನ್‌ಗೆ ಆಲೌಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News