ಕೇಂದ್ರದ ಯೋಜನೆಗಳಲ್ಲಿ ರಾಜ್ಯಗಳ ಪಾಲಿಲ್ಲವೇ?

Update: 2017-10-12 18:16 GMT

ಮಾನ್ಯರೆ,

   ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ಘೋಷಿಸುತ್ತದೆ. ಈ ಯೋಜನೆಗಳಿಗೆ ಸಂಪೂರ್ಣವಾದಂತಹ ವೆಚ್ಚವನ್ನು ತಾನೇ ನೀಡದೆ ಕೆಲವು ಯೋಜನೆಗಳಲ್ಲಿ ಶೇ. 50 ಇಲ್ಲವೇ ಇನ್ನೂ ಕಡಿಮೆ ಮೊತ್ತವನ್ನು ನೀಡಿ ಕೇಂದ್ರ ಸರಕಾರದ ಯೋಜನೆಗಳು ಎಂದು ಬಿಂಬಿಸಿಕೊಳ್ಳುತ್ತದೆ. ರೈಲು, ಮೆಟ್ರೋ ರೈಲಿನ ಯೋಜನೆ, ನೀರಾವರಿ ಯೋಜನೆಗಳು, ಪಿಂಚಣಿ ಯೋಜನೆಗಳು, ಇವುಗಳಲ್ಲಿ ರಾಜ್ಯ ಸರಕಾರಗಳ ಪಾಲು ಮತ್ತು ರಾಜ್ಯ ಸರಕಾರಗಳು ಜವಾಬ್ದಾರಿ ಹೊತ್ತು ಮಾಡಿರುವ ಸಾಲ ಹೆಚ್ಚಿನ ಪ್ರಮಾಣದ್ದಾಗಿರುತ್ತದೆ. ಆದರೆ ಕೇಂದ್ರ ಸರಕಾರ ಈ ಯೋಜನೆಗಳು ತನ್ನದು ಎಂದು ಬಿಂಬಿಸಿಕೊಳ್ಳುತ್ತದೆ. ಸೌಜನ್ಯಕ್ಕೂ ಸಹ ರಾಜ್ಯ ಸರಕಾರದ ಪಾಲುದಾರಿಕೆಯ ಬಗ್ಗೆ ಪ್ರಸ್ತಾಪಿಸುವುದಿಲ್ಲ.

ವಿಶೇಷವಾಗಿ ಹಲವಾರು ಯೋಜನೆಗಳಿಗೆ ಭೂಮಿಯನ್ನು ನೀಡುವುದು ಆಯಾ ರಾಜ್ಯ ಸರಕಾರಗಳಾಗಿವೆ. ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗಳು, ಮತ್ತು ರೈಲ್ವೆ ಯೋಜನೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳುವುದೂ ಕೂಡಾ ಆಯಾ ರಾಜ್ಯ ಸರಕಾರವೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದಾದರೂ ಕೇಂದ್ರ ಸರಕಾರ ತಾನು ಘೋಷಿಸುವ ಯೋಜನೆಗಳಿಗೆ ಸಂಪೂರ್ಣವಾದ ಹಣವನ್ನು ತಾನೇ ನೀಡಬೇಕು. ಇಲ್ಲವೇ ಒಂದು ವೇಳೆ ರಾಜ್ಯ ಸರಕಾರಗಳ ಪಾಲು ಇದ್ದರೆ ಜಾಹೀರಾತುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಶೇಕಡಾವಾರು ಪಾಲಿನ ಬಗ್ಗೆ ಪ್ರಕಟಿಸಬೇಕು.

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರಗಳನ್ನು ಕಡೆಗಣಿಸಿ, ಕೇಂದ್ರ ಸರಕಾರವೇ ಎಲ್ಲವನ್ನೂ ಮಾಡುತ್ತಿದೆ ಎನ್ನುವ ಭ್ರಮೆಯನ್ನು ಜಾಹೀರಾತುಗಳ ಮೂಲಕ ಹುಟ್ಟಿಸುತ್ತಿದೆ. ಕೇಂದ್ರ ಸರಕಾರದ ಖಜಾನೆ ತುಂಬುವುದೇ ರಾಜ್ಯ ಸರಕಾರಗಳು ನೀಡುವ ವಿವಿಧ ತೆರಿಗೆ ಹಣದಿಂದ ಎನ್ನುವುದನ್ನು ಮರೆತು ಕೇಂದ್ರದ ಕೆಲವು ಮಂತ್ರಿಗಳಿಂದ ‘ನಾವು ಕೊಡುತ್ತೇವೆ’ ಎನ್ನುವ ಅಹಂಕಾರದ ಮಾತುಗಳು ಪದೇ ಪದೇ ಬರುತ್ತಿವೆ. ಕೇಂದ್ರ ಸರಕಾರ ರಾಜ್ಯಗಳಿಗೆ ನೀಡುವ ಅನುದಾನ ಅಥವಾ ಸಹಾಯಧನ ಭಿಕ್ಷೆಯಲ್ಲ. ಅದು ರಾಜ್ಯಗಳ ಪಾಲು. ಕೇಂದ್ರ ಸರಕಾರ ಕೊಡಲೇ ಬೇಕಾದದ್ದು ಹಾಗಾಗಿಯೇ ಕೊಡುತ್ತಿದೆ. ಕೊಟ್ಟದ್ದನ್ನು ತನ್ನ ಕೈಯಿಂದಲೇ ಕೊಡುತ್ತಿದ್ದೇನೆ ಎಂದು ಬಿಂಬಿಸುವುದು ಸರಿಯೇ?

-ಕೆ. ಎಸ್. ನಾಗರಾಜ್, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News