ಜರ್ಮನಿಗೆ ಪ್ರಿ-ಕ್ವಾರ್ಟರ್ ಫೈನಲ್ ಕನಸು

Update: 2017-10-12 18:29 GMT

ಕೊಚ್ಚಿ, ಅ.12: ಇರಾನ್ ವಿರುದ್ಧ 0-4 ಅಂತರದಿಂದ ಹೀನಾಯವಾಗಿ ಸೋತಿರುವ ಯುರೋಪ್‌ನ ಬಲಿಷ್ಠ ತಂಡ ಜರ್ಮನಿ ಶುಕ್ರವಾರ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಆಫ್ರಿಕದ ಗಿನಿಯಾ ತಂಡದ ವಿರುದ್ಧ ಮಾಡು-ಮಡಿ ಪಂದ್ಯವನ್ನು ಆಡಲಿದೆ.

ಕೋಸ್ಟರಿಕಾ ತಂಡವನ್ನು 2-1 ರಿಂದ ಮಣಿಸುವ ಮೂಲಕ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ್ದ ಜರ್ಮನಿ ತನ್ನ ಎರಡನೆ ಲೀಗ್ ಪಂದ್ಯದಲ್ಲಿ ಇರಾನ್ ವಿರುದ್ಧ ಹೀನಾಯವಾಗಿ ಸೋತಿದೆ.

ಗಿನಿಯಾ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಜರ್ಮನಿ ಎಡವಿದರೆ ಟೂರ್ನಮೆಂಟ್‌ನಿಂದ ನಿರ್ಗಮಿಸಿದ ಮೊದಲ ಪ್ರಮುಖ ತಂಡ ಎನಿಸಿಕೊಳ್ಳಲಿದೆ. ಸಿ ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆದು ಅಂತಿಮ-16ರ ಸುತ್ತಿಗೆ ನೇರ ಪ್ರವೇಶ ಪಡೆಯಲು ಶುಕ್ರವಾರದ ಪಂದ್ಯ ಜರ್ಮನಿಗೆ ಅತ್ಯಂತ ಮುಖ್ಯವಾಗಿದೆ. ಸಿ ಗುಂಪಿನಲ್ಲಿ ಒಟ್ಟು ಆರು ಅಂಕವನ್ನು ಗಳಿಸಿರುವ ಇರಾನ್ ಈಗಾಗಲೇ ನಾಕೌಟ್‌ಗೆ ತೇರ್ಗಡೆಯಾಗಿದೆ.

ಮತ್ತೊಂದೆಡೆ, ಗಿನಿಯಾ ತಂಡ ತನ್ನ ಮೊದಲ ಪಂದ್ಯದಲ್ಲಿ ಇರಾನ್ ವಿರುದ್ಧ 1-3 ರಿಂದ ಸೋತಿತ್ತು. ಎರಡನೆ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ 1-1 ರಿಂದ ಡ್ರಾ ಸಾಧಿಸಿತ್ತು. ಕೇವಲ ಒಂದು ಅಂಕ ಗಳಿಸಿರುವ ಗಿನಿಯಾ ತಂಡ ಜರ್ಮನಿ ವಿರುದ್ಧ ಜಯ ಸಾಧಿಸಿದರೆ ಅಂತಿಮ-16ರ ಸುತ್ತು ತಲುಪುತ್ತದೆ.

ಕೋಸ್ಟರಿಕಾಗೆ ಇರಾನ್ ಸವಾಲು: ಜರ್ಮನಿ ವಿರುದ್ಧ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಇರಾನ್ ತಂಡ ಮಾರ್ಗೊವಾದಲ್ಲಿ ಶುಕ್ರವಾರ ನಡೆಯಲಿರುವ ‘ಸಿ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೋಸ್ಟರಿಕಾವನ್ನು ಎದುರಿಸಲಿದೆ.

ಸಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿರುವ ಇರಾನ್ ತಂಡ ನಾಕೌಟ್ ಹಂತ ತಲುಪುವ ಮೂಲಕ ಅಮೆರಿಕ, ಪರಾಗ್ವೆ, ಬ್ರೆಝಿಲ್, ಫ್ರಾನ್ಸ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಸೇರಿಕೊಂಡಿದೆ.

ತನ್ನ ಮೊದಲ ಪಂದ್ಯದಲ್ಲಿ ಜರ್ಮನಿಗೆ ಶರಣಾಗಿರುವ ಕೋಸ್ಟರಿಕಾ ತಂಡ ಗಿನಿಯಾ ವಿರುದ್ಧ ಎರಡನೆ ಪಂದ್ಯವನ್ನು ಡ್ರಾಗೊಳಿಸಿ ಒಂದಂಕವನ್ನು ಗಳಿಸಿದೆ. ನಾಕೌಟ್ ಸುತ್ತಿಗೆ ತೇರ್ಗಡೆಯಾಗಬೇಕಾದರೆ ಶುಕ್ರವಾರದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News