ರಣಜಿ ಟ್ರೋಫಿ: ಬೃಹತ್ ಮುನ್ನಡೆಯಲ್ಲಿ ಕರ್ನಾಟಕ

Update: 2017-10-15 18:09 GMT

ಮೈಸೂರು, ಅ.15: ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್(123) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಕೃಷ್ಣಪ್ಪ ಗೌತಮ್(ಅಜೇಯ 147) ಶತಕದ ನೆರವಿನಿಂದ ಕರ್ನಾಟಕ ತಂಡ ಅಸ್ಸಾಂ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಬೃಹತ್ ಮುನ್ನಡೆಯಲ್ಲಿದೆ.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಎರಡನೆ ದಿನವಾದ ರವಿವಾರದ ಪಂದ್ಯ ಮಂದ ಬೆಳಕಿನಿಂದಾಗಿ ಬೇಗನೆ ಕೊನೆಗೊಂಡಾಗ ಕರ್ನಾಟಕ 6 ವಿಕೆಟ್‌ಗಳ ನಷ್ಟಕ್ಕೆ 427 ರನ್ ಗಳಿಸಿದೆ.

 ವಿಕೆಟ್ ನಷ್ಟವಿಲ್ಲದೆ 77 ರನ್‌ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ 2ನೆ ದಿನದಾಟದಲ್ಲಿ 85 ಓವರ್‌ಗಳ ಆಟದಲ್ಲಿ 350 ರನ್ ಸೇರಿಸಿದೆ. ಒಟ್ಟು 282 ರನ್ ಮುನ್ನಡೆಯಲ್ಲಿದೆ. ಅಗ್ರ ಕ್ರಮಾಂಕದಲ್ಲಿ ಆರ್.ಸಮರ್ಥ್(123, 234 ಎಸೆತ, 10 ಬೌಂಡರಿ) ಹಾಗೂ ಮಾಯಾಂಕ್ ಅಗರವಾಲ್(31) ಮೊದಲ ವಿಕೆಟ್‌ಗೆ 92 ರನ್ ಜೊತೆಯಾಟ ನಡೆಸಿದರು. ಕೆ.ಅಬ್ಬಾಸ್(30) ಅವರೊಂದಿಗೆ 3ನೆ ವಿಕೆಟ್‌ಗೆ 98 ರನ್ ಸೇರಿಸಿದ ಸಮರ್ಥ್ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು.

ಸಮರ್ಥ್ ಔಟಾದ ಬಳಿಕ ತಂಡವನ್ನು ಆಧರಿಸಿದ ಗೌತಮ್(ಅಜೇಯ 147, 158 ಎಸೆತ, 10 ಬೌಂಡರಿ, 6 ಸಿಕ್ಸರ್)ಸ್ಟುವರ್ಟ್ ಬಿನ್ನಿ ಅವರೊಂದಿಗೆ 6ನೆ ವಿಕೆಟ್‌ಗೆ 103 ರನ್ ಸೇರಿಸಿದರು. ಬಿನ್ನಿ ಔಟಾದ ಬಳಿಕ ಶ್ರೇಯಸ್ ಗೋಪಾಲ್(ಅಜೇಯ 38) ಅವರೊಂದಿಗೆ ಇನಿಂಗ್ಸ್ ಬೆಳೆಸಿದ ಗೌತಮ್ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 109 ರನ್ ಸೇರಿಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.

 ಅಸ್ಸಾಂ ಪರ ಅನೂಪ್ ದಾಸ್(3-101) ಹಾಗೂ ಸ್ವರೂಪಂ(3-80) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News