ಲಂಕಾ ವಿರುದ್ಧ ಪಾಕ್‌ಗೆ 3-0 ಅಂತರದಲ್ಲಿ ಏಕದಿನ ಸರಣಿ ವಿಜಯ

Update: 2017-10-19 18:16 GMT

ಅಬುಧಾಬಿ, ಅ.19: ಯುವ ಆರಂಭಿಕ ದಾಂಡಿಗ ಇಮಾಮ್ ಉಲ್ ಹಕ್ ಚೊಚ್ಚಲ ಪ್ರವೇಶದಲ್ಲೇ ದಾಖಲಿಸಿದ ಶತಕದ ನೆರವಿನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಗಳಿಸಿದ್ದು, ಇದರೊಂದಿಗೆ ಪಾಕಿಸ್ತಾನ ಐದು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

 ಪಾಕಿಸ್ತಾನದ ಆಯ್ಕೆ ಸಮಿತಿಯ ಮುಖ್ಯಸ್ಥ ಇಂಝಮಮ್ ಉಲ್ ಹಕ್ ಅವರ ಅಳಿಯ ಇಮಾಮ್ ಉಲ್ ಹಕ್ ಚೊಚ್ಚಲ ಪ್ರವೇಶದಲ್ಲೇ ಶತಕ ದಾಖಲಿಸಿ ಇತಿಹಾಸ ಬರೆದಿದ್ದಾರೆ. ಇನ್ನೊಂದೆಡೆ ಯುವ ವೇಗಿ ಹಸನ್ ಅಲಿ ವೇಗವಾಗಿ ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆಯುವ ಮೂಲಕ ಪಾಕ್‌ನ ಗ್ರೇಟ್ ವಕಾರ್ ಯೂನಿಸ್ ದಾಖಲೆಯನ್ನು ಸರಿಗಟಿದ್ದಾರೆ. ಈ ಕಾರಣದಿಂದಾಗಿ ಮೂರನೆ ಏಕದಿನ ಪಂದ್ಯ ಗಮನ ಸೆಳೆದಿದೆ.

ಶೈಖ್ ಝಾಯಿದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಹಸನ್ ಅಲಿ(34ಕ್ಕೆ 5) ದಾಳಿಗೆ ಸಿಲುಕಿ 48.2 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟಾಗಿದೆ.

ಗೆಲುವಿಗೆ 209 ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನ ತಂಡ 42.3 ಓವರ್‌ಗಳಲ್ಲಿ 3.ವಿಕೆಟ್ ನಷ್ಟದಲ್ಲಿ 209 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ.

 ಆರಂಭಿಕ ದಾಂಡಿಗ ಇಮಾಮ್ ಉಲ್ ಹಕ್ 125 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 100 ರನ್ ಗಳಿಸಿದರು. ಇದರೊಂದಿಗೆ ಇಮಾಮ್ ಉಲ್ ಹಕ್ ಚೊಚ್ಚಲ ಪ್ರವೇಶದಲ್ಲೇ ಶತಕ ದಾಖಲಿಸಿದ ಪಾಕಿಸ್ತಾನದ ಎರಡನೆ ಕ್ರಿಕೆಟಿಗ. ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿರುವ 13ನೆ ದಾಂಡಿಗ.

ಪಾಕಿಸ್ತಾನದ ಸಲೀಮ್ ಇಲಾಹಿ ಅವರು 1995ರಲ್ಲಿ ಗುಜ್ರಾನ್‌ವಾಲದಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಶತಕ ದಾಖಲಿಸಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶದಲ್ಲೇ ಶತಕ ದಾಖಲಿಸಿದ ಮೊದಲ ದಾಂಡಿಗ ಎನಿಸಿಕೊಂಡಿದ್ದರು.

 ಇಮಾಮ್ ಅವರು 89 ರನ್ ಗಳಿಸಿದ್ದಾಗ ಔಟಾಗುವ ಅವಕಾಶದಿಂದ ಪಾರಾಗಿದ್ದರು. ಒಂದು ವೇಳೆ ಔಟಾಗಿದ್ದರೆ ಅವರಿಗೆ ದಾಖಲೆ ನಿರ್ಮಿಸಲು ಸಾಧ್ಯವಿರಲಿಲ್ಲ. 42ನೆ ಓವರ್‌ನಲ್ಲಿ ಅವರು ಶತಕ ದಾಖಲಿಸಿದ ಬೆನ್ನಲ್ಲೇ ಔಟಾದರು. ಆಗ ಪಾಕಿಸ್ತಾನ ಗೆಲುವಿನ ಸನಿಹಕ್ಕೆ ತಲುಪಿತ್ತು.

ಮೊದಲ ವಿಕೆಟ್‌ಗೆ ಫಾಕರ್ ಝಮಾನ್ ಜೊತೆ ಇಮಾಮ್ 78ರನ್, ಎರಡನೆ ವಿಕೆಟ್‌ಗೆ ಬಾಬರ್ ಅಝಮ್ ಅವರೊಂದಿಗೆ 66ರನ್, ಮೂರನೆ ವಿಕೆಟ್‌ಗೆ ಹಫೀಜ್ ಅವರೊಂದಿಗೆ 59 ರನ್‌ಗಳ ಜೊತೆಯಾಟ ನೀಡಿದ್ದರು.

ಪಾಕಿಸ್ತಾನದ ಫಾಕರ್ ಝಮಾನ್ 29ರನ್, ಬಾಬರ್ ಅಝಮ್ 30, ಮುಹಮ್ಮದ್ ಹಫೀಝ್ ಔಟಾಗದೆ 34 ರನ್ ಗಳಿಸಿದರು.

 ಟಾಸ್ ಜಯಿಸಿದ ಶ್ರೀಲಂಕಾ ತಂಡ 48.2 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟಾಗಿತ್ತು. ಲಂಕಾದ ಪರ ನಾಯಕ ಉಪುಲ್ ತರಂಗ 61 ರನ್ ದಾಖಲಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್. ಮೊದಲ ವಿಕೆಟ್‌ಗೆ ತರಂಗ ಮತ್ತು ಡಿಕ್ವೆಲ್ಲಾ(18) 59 ರನ್‌ಗಳ ಜೊತೆಯಾಟ ನೀಡಿದ್ದರು. 25 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 102 ರನ್ ಮಾಡಿದ್ದ ಶ್ರೀಲಂಕಾ ತಂಡ ಬಳಿಕ 107 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.ಶ್ರೀಲಂಕಾ ತಂಡ ಪಾಕ್ ವಿರುದ್ಧ ಮೂರನೆ ಏಕದಿನ ಪಂದ್ಯದಲ್ಲಿ ಸೋಲುವುದರೊಂದಿಗೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 9ನೆ ಸೋಲು ಅನುಭವಿಸಿದೆ.

ಸಂಕ್ಷಿಪ್ತ ಸ್ಕೋರ್ ವಿವರ

►ಶ್ರೀಲಂಕಾ 48.2 ಓವರ್‌ಗಳಲ್ಲಿ ಆಲೌಟ್ 208(ಉಪುಲ್ ತರಂಗ 61, ತಿಸ್ಸರಾ ಪೆರೆರಾ 38; ಹಸನ್ ಅಲಿ 34ಕ್ಕೆ 5).

►ಪಾಕಿಸ್ತಾನ 42.3 ಓವರ್‌ಗಳಲ್ಲಿ 209/3( ಇಮಾಮ್ ಉಲ್ ಹಕ್ 100, ಹಫೀಝ್ ಔಟಾಗದೆ 34, ಅಝಮ್ 30; ಗಾಮಗೆ35ಕ್ಕೆ 1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News