×
Ad

ಭಾರತಕ್ಕೆ ಪಾಕ್ ಸವಾಲು

Update: 2017-10-20 23:46 IST

ಢಾಕಾ, ಅ.20: ಅತ್ಯುತ್ತಮ ಪ್ರದರ್ಶನದ ಮೂಲಕ ಏಷ್ಯಾಕಪ್‌ನಲ್ಲಿ ಗೆಲುವಿನ ಅಜೇಯ ಓಟ ಮುಂದುವರಿಸಿರುವ ಭಾರತ ಶನಿವಾರ ನಡೆಯಲಿರುವ ಏಷ್ಯಾಕಪ್‌ನ ಸೂಪರ್ -4ರ ಮೂರನೆ ಹಾಗೂ ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಇನ್ನೊಂದು ಸೂಪರ್-4 ಪಂದ್ಯದಲ್ಲಿ ಕೊರಿಯಾವನ್ನು ಮಲೇಷ್ಯಾ ಎದುರಿಸಲಿದೆ.

ಟೂರ್ನಮೆಂಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಇನ್ನೊಮ್ಮೆ ಪಾಕಿಸ್ತಾನವನ್ನು ಮಣಿಸಿ ಅಗ್ರಸ್ಥಾನದೊಂದಿಗೆ ಫೈನಲ್‌ಗೇರಲು ನೋಡುತ್ತಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಹಾಕಿ ತಂಡ ಪಾಕಿಸ್ತಾನ ತಂಡಕ್ಕಿಂತ ಬಲಿಷ್ಠವಾಗಿದೆ. ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪಾಕಿಸ್ತಾನವನ್ನು ಈ ಟೂರ್ನಮೆಂಟ್‌ನ ಗ್ರೂಪ್ ಹಂತದ ಪಂದ್ಯದಲ್ಲಿ ಸೋಲಿಸಿತ್ತು.

ಸೂಪರ್-4 ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-1 ಡ್ರಾ ಸಾಧಿಸಿತ್ತು. ಎರಡನೆ ಪಂದ್ಯದಲ್ಲಿ ಮಲೇಷ್ಯಾದ ವಿರುದ್ಧ 6-2 ಅಂತರದಲ್ಲಿ ಭರ್ಜರಿ ಜಯ ಗಳಿಸಿತ್ತು.

ಭಾರತ ಸೂಪರ್-4 ಹಂತದ ಹಣಾಹಣಿಯಲ್ಲಿ ಎರಡು ಪಂದ್ಯಗಳಲ್ಲಿ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಲೇಷ್ಯಾ(3 ಅಂಕ), ಕೊರಿಯಾ (2 ಅಂಕ) ಮತ್ತು ಪಾಕಿಸ್ತಾನ (1) ಕ್ರಮವಾಗಿ ಎರಡರಿಂದ ನಾಲ್ಕರ ತನಕ ಸ್ಥಾನ ಪಡೆದಿದೆ.

ಭಾರತ ಡ್ರಾ ಸಾಧಿಸಿದರೂ ಅಗ್ರಸ್ಥಾನದೊಂದಿಗೆ ಫೈನಲ್ ತಲುಪಲಿದೆ. ಒಂದು ವೇಳೆ ಭಾರತ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರೆ ಮಾತ್ರ ಪಾಕ್‌ಗೆಫೈನಲ್ ಹಂತಕ್ಕೆ ತಲುಪಲು ಸಾಧ್ಯವಿದೆ.

ಭಾರತದ ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್, ಎಸ್.ವಿ.ಸುನೀಲ್, ಲಲಿತ್ ಉಪಾಧ್ಯಾಯ ಮತ್ತು ಗುರ್ಜಂತ್ ಸಿಂಗ್ ಭಾರತದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News